Advertisement

ಅಸ್ಸಾಂನಲ್ಲಿ ಕಮಲ 2ನೇ ಇನ್ನಿಂಗ್ಸ್‌

11:57 PM May 02, 2021 | Team Udayavani |

ದಿಸ್ಪುರ: ಅಸ್ಸಾಂನಲ್ಲಿ ಮತದಾರ ಸತತ 2ನೇ ಬಾರಿಗೆ ಎನ್‌ಡಿಎ ಕೈ ಹಿಡಿದಿದ್ದು, ಯುಪಿಎ ಮೈತ್ರಿಕೂಟವನ್ನು ಮತ್ತೆ ವಿಪಕ್ಷದಲ್ಲಿ ಕೂರಿಸಿದ್ದಾನೆ. ಈ ಮೂಲಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಸ್ಸಾಂನಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಂತಾಗಿದೆ.

Advertisement

1978ರಲ್ಲಿ ಕಾಂಗ್ರೆಸ್ಸೇತರ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತಾದರೂ, ಕೇವಲ 18 ತಿಂಗಳಲ್ಲಿ ಸರಕಾರ ಉರುಳಿಬಿದ್ದಿತ್ತು. 1985, 1996ರಲ್ಲಿ ಅಧಿಕಾರ ಕಳಕೊಂಡಾಗಲೆಲ್ಲ ಚಡಪಡಿಸಿದ್ದ ಕಾಂಗ್ರೆಸ್‌, ಮರುವರ್ಷವೇ ತನ್ನ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಸಫ‌ಲವಾಗಿತ್ತು. ಆದರೆ ಕಾಂಗ್ರೆಸ್‌ನ “ಮರುವಶ’ ಯತ್ನ ಈ ಬಾರಿ ಕೈಗೂಡಲೇ ಇಲ್ಲ!

ಎನ್‌ಡಿಎ- 81 (ಬಿಜೆಪಿ- 63, ಎಜಿಪಿ-11, ಯುಪಿಪಿಎಲ್‌- 7), ಯುಪಿಎ-43 (ಕಾಂಗ್ರೆಸ್‌- 29, ಎಐಯುಡಿಎಫ್- 13, ಬಿಪಿಎಫ್- 1) ಇತರೆ- 2 ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಿದ್ದಾರೆ.

ಎನ್‌ಡಿಎ ಗೆದ್ದಿದ್ದೇಕೆ?: ಹಿಂದೂ ಮತಗಳನ್ನು ಕ್ರೂಢೀಕರಣ- ಇಲ್ಲಿ ಎನ್‌ಡಿಎ ಪ್ರಯೋಗಿಸಿದ ಪ್ರಧಾನ ಅಸ್ತ್ರ. 2016ರ ವಿಧಾನಸಭೆ ಚುನಾವಣೆ ಅಲ್ಲದೆ 2014 ಮತ್ತು 2019ರ ಸಂಸತ್‌ ಚುನಾವಣೆ ಯಲ್ಲೂ ಈ ತಂತ್ರ ಕ್ಲಿಕ್‌ ಆಗಿತ್ತು. ಕಾಂಗ್ರೆಸ್‌ ಆಡಳಿತಾವಧಿ ಯಲ್ಲಿ ಉಲ್ಬಣಗೊಂಡಿದ್ದ ಒಳ ನುಸುಳುವಿಕೆ ಸಮಸ್ಯೆ, ಬಾಂಗ್ಲಾದ ಅಕ್ರಮ ಮುಸ್ಲಿಂ ವಲಸಿಗರಿಗೆ ಆಶ್ರಯ ನೀಡಿದ್ದನ್ನೇ ಎನ್‌ಡಿಎ ವಿರೋಧಿಸುತ್ತಾ ಬಂದಿತ್ತು. ದಂಗೆಕೋರರನ್ನು ಹತ್ತಿಕ್ಕಿ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆ, ಒಳನುಸುಳುವಿಕೆಗೆ ತಡೆ, ವಿವಿಧ ಅಭಿವೃದ್ಧಿ ಯೋಜನೆಗಳು- ಎನ್‌ಡಿಎಗೆ ಇಲ್ಲಿ ವರದಾನವಾಗಿವೆ.

ಸಿಎಎ ಕುರಿತ ಜಾಣಮೌನ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್‌ ಅನುಮೋದಿಸಿದಾಗ, ಹೊತ್ತಿ ಉರಿದ  ರಾಜ್ಯಗಳಲ್ಲಿ ಅಸ್ಸಾಂ ಕೂಡ ಒಂದು. ಆದರೆ ಈ ಜ್ವಾಲೆಯನ್ನು ಚುನಾವಣೆ ವೇಳೆ ಬಿಜೆಪಿ ತನ್ನ ಜಾಣ ಮೌನದಿಂದಲೇ ಆರಿಸಿತ್ತು. ಕೊರೊನಾ ಬಿಕ್ಕಟ್ಟಿನ ಕಾರಣ ಮುಂದಿಟ್ಟು, ಎಲ್ಲೂ ಸಿಎಎ ಜಾರಿ ಪ್ರಸ್ತಾಪಿಸದೆ, ಪರಿಷ್ಕೃತ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಮಾತ್ರವೇ ವಾಗ್ಧಾನ ನೀಡಿತ್ತು.  ನೆರೆ ಸಂಕಷ್ಟ ತಗ್ಗಿಸಲು “ಬ್ರಹ್ಮಪುತ್ರಾ ಮಿಷನ್‌’ ಯೋಜನೆಯಡಿ ಪ್ರವಾಹಮುಕ್ತ ಅಸ್ಸಾಂ ಶಪಥ, ಯುವಕರಿಗೆ ಉದ್ಯೋಗ ಭರವಸೆ, ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕೆ ಕ್ರಮ- ಪ್ರಣಾಳಿಕೆಯಲ್ಲಿನ ಈ ಅಂಶಗಳು ಬಿಜೆಪಿಯ ಕೈಹಿಡಿದಿವೆ.

Advertisement

ಸೋನೊವಾಲ್ v/s ಹಿಮಾಂತ! ಸಿಎಂ ಅಭ್ಯರ್ಥಿ ಆಯ್ಕೆಯೇ ಸವಾಲು :

ಅಸ್ಸಾಂನಲ್ಲಿ ಬಿಜೆಪಿಯ ಗೆಲುವಿನ ಪತಾಕೆ ಹಾರಿಸುವಲ್ಲಿ ಸಿಎಂ ಸರ್ಬಾನಂದ ಸೋನಾವಾಲ್‌ ಪಾತ್ರ ಎಷ್ಟಿದೆಯೋ, ಸಚಿವ ಹಿಮಾಂತ ಬಿಸ್ವಾ ಶರ್ಮಾ ಪಾತ್ರವೂ ಅಷ್ಟೇ ನಿರ್ಣಾಯಕವಾಗಿದೆ. ಯಾವುದೇ ವಿವಾದಗಳಿಲ್ಲದೆ ಸರ್ಬಾನಂದ 5 ವರ್ಷ ಸ್ವಚ್ಛ ಆಡಳಿತ ನೀಡಿದ್ದರೂ, ಹೈಕಮಾಂಡ್‌ ಒಲವು ಈ ಬಾರಿ ಹಿಮಾಂತ ಕಡೆಗೆ ಇದೆ ಎನ್ನಲಾ ಗುತ್ತಿದೆ.  ಈಶಾನ್ಯ ರಾಜ್ಯಗಳಲ್ಲಿ ಹಿಮಾಂತರನ್ನು ಶಾ ಬೆನ್ನೆಲುಬು ಅಂತಲೇ ವ್ಯಾಖ್ಯಾನಿಸಲಾಗುತ್ತಿದೆ. ಇವೆಲ್ಲದರ ನಡುವೆ, ಅಸ್ಸಾಂನ ಬಿಜೆಪಿ ಸಂಸದರೂ ಹಿಮಾಂತ ಹೆಸರನ್ನೇ ಮುನ್ನೆಲೆಗೆ ತರುತ್ತಿದ್ದಾರೆ.

ಆಪರೇಷನ್ ಭಯದ ಹೈಡ್ರಾಮಾಕ್ಕೆ ಬಿತ್ತು ತೆರೆ :

ಚುನಾವಣೆ ಮುಗಿಯುತ್ತಿದ್ದಂತೆ, ಆಪರೇಷನ್‌ ಭಯದಿಂದ ಕಾಂಗ್ರೆಸ್‌ ನೇತೃತ್ವದ ಮಹಾಜೋತ್‌ ಮೈತ್ರಿಕೂಟ ಗೆಲ್ಲಬಲ್ಲಂಥ ತನ್ನ ಅಭ್ಯರ್ಥಿಗಳನ್ನು ವಿವಿಧೆಡೆಗೆ ಸ್ಥಳಾಂತರ ಮಾಡಿತ್ತು. ಎಐಯುಡಿಎಫ್ ಅಭ್ಯರ್ಥಿಗಳು ರಾಜಸ್ಥಾನಕ್ಕೆ ಹಾಗೂ ಬಿಪಿಎಫ್ ಅಭ್ಯರ್ಥಿಗಳು ಮಲೇಷ್ಯಾದ ಸ್ಟಾರ್‌ ಹೊಟೆಧೀಲ್‌ಗಳಿಗೆ ತೆರಳಿದ್ದರು. ಆದರೆ ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ಅವರೆಲ್ಲರೂ ಅನಿವಾರ್ಯವಾಗಿ ಅಸ್ಸಾಂಗೆ ಮರಳಿ, ಗುವಾಹಟಿಯ ರೆಸಾರ್ಟ್‌ನಲ್ಲಿ ತಂಗಿದ್ದರು. ಆದರೆ ಇವರಲ್ಲಿ ಬಹುತೇಕರು ಹೇಳಹೆಸರಿಲ್ಲದಂತೆ ಸೋತು ಹೋಗಿದ್ದಾರೆ.

ಕಾಂಗ್ರೆಸ್ ಮೈತ್ರಿ ಎಡವಿದ್ದೆಲ್ಲಿ? :

ಕಾಂಗ್ರೆಸ್‌ ನೇತೃತ್ವದ ಯುಪಿಎ ಇಲ್ಲಿ “ಮಹಾಜೋತ್‌’ ಕೂಟದೊಂದಿಗೆ ಕಣಕ್ಕಿಳಿದಿತ್ತು. ಅಕ್ರಮ ವಲಸಿಗರನ್ನು ಬೆಂಬಲಿಸಿದ್ದ ಎಐಯುಡಿಎಫ್ ಜತೆಗಿನ ಕಾಂಗ್ರೆಸ್‌ ಮೈತ್ರಿ ಯುಪಿಎ ಸೋಲಿಗೆ ಪ್ರಮುಖ ಕಾರಣ ಅಂತಲೇ ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಹಿಮಾಂತ ಬಿಸ್ವಾ ಶರ್ಮಾ ಇದಕ್ಕೆ “ಮೊಘಲ್‌ ಮೈತ್ರಿ’ ಅಂತಲೇ ಹಣೆಪಟ್ಟಿ ಹಚ್ಚಿದ್ದರು. ಅಸ್ಸಾಂನಲ್ಲಿ ಸಿಎಎ ವಿರುದ್ಧ ಹೋರಾಟ ರೂಪಿಸಿದ್ದ ಎಜೆಪಿ, ರಾಯ್ಜೋರ್‌ ದಳ್‌ ಜತೆಗಿದ್ದರೂ, ಮಹಾಜೋತ್‌ ಅದನ್ನು ಮತವಾಗಿ ಪರಿವರ್ತಿಸುವಲ್ಲಿ ಸೋತಿದೆ.

ಅಸ್ಸಾಂನ ಜನ ಮತ್ತೆ ಎನ್‌ಡಿಎಗೆ ಆಶೀರ್ವದಿಸಿದ್ದಾರೆ. ಎಜಿಪಿ, ಯುಜಿಪಿಯನ್ನೂ ಒಳಗೊಂಡಂತೆ ನಾವು ನೂತನ ಸರಕಾರ ರಚಿಸುತ್ತೇವೆ.-ಸರ್ಬಾನಂದ ಸೋನೋವಾಲ್, ಹಾಲಿ ಸಿಎಂ

ನರೇಂದ್ರ ಮೋದಿ ನೇತೃತ್ವದ ಜನಪರ ನೀತಿಗಳು, ಸರ್ಬಾನಂದರ ಉತ್ತಮ ಆಡಳಿತ ಬಿಜೆಪಿಯನ್ನು ಅಸ್ಸಾಂನಲ್ಲಿ ಮತ್ತೆ ಗೆಲ್ಲಿಸಲು ಕಾರಣವಾಗಿದೆ.-ರಾಜನಾಥ್ ಸಿಂಗ್, ರಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next