Advertisement

ಮಹಿಳೆ ಮೇಲೆ ಹಲ್ಲೆ ನಡೆಸಿದ ಎಎಸ್‌ಐ ಅಮಾನತು

06:49 AM Jan 30, 2019 | |

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಗೆ ಕರೆತರಲಾಗಿದ್ದ ಪುತ್ರಿಯನ್ನು ಕರೆದೊಯ್ಯಲು ಬಂದ ಮಹಿಳೆ ಮೇಲೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹಲ್ಲೆ ನಡೆಸಿದ್ದಲ್ಲದೆ ಆಕೆಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರ ಹಾಕಿ ಅಮಾನವೀಯವಾಗಿ ನಡೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಆಂಧಪ್ರದೇಶ ಮೂಲದ ಸರಸ್ವತಿ ಎಂಬುವರ ಜತೆ ಎಎಸ್‌ಐ ಅನುಚಿತ ವರ್ತನೆ ಹಾಗೂ ದೌರ್ಜನ್ಯ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ ಎಚ್ಚೆತ್ತ ನಗರ ಪೊಲೀಸ್‌ ಇಲಾಖೆ, ಎಎಸ್‌ಐ ರೇಣುಕಯ್ಯ ಎಂಬುವರನ್ನು ಸೇವೆಯಿಂದ ಆಮಾನತುಗೊಳಿಸಿ ವಿಚಾರಣೆಗೆ ಆದೇಶಿಸಿದೆ.

ಇದೇ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಠಾಣೆಗೆ ಭೇಟಿ ನೀಡಿ, ಘಟನೆಯ ವಿವರ ಪಡೆದುಕೊಂಡಿದ್ದಾರೆ. ಈ ಮಧ್ಯೆ, ಸರಸ್ವತಿ ಅವರ ಪುತ್ರಿ ಕಾಟೇರಮ್ಮ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ನಮ್ಮ ತಾಯಿಯೇ ಪೊಲೀಸರ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ನಡೆದಿದ್ದೇನು?: ಆಂಧ್ರಪ್ರದೇಶದ ಸಂತೆಗೊಲ್ಲೂರು ಮೂಲದ ಸರಸ್ವತಿ, ಪುತ್ರಿ ಕಾಟೇರಮ್ಮನನ್ನು 11 ವರ್ಷ ವಯಸ್ಸಿನಲ್ಲೇ ತನ್ನ ಸಹೋದರನಿಗೆ ಮದುವೆ ಮಾಡಿದ್ದರು. ಆದರೆ, ಸುಮಾರು 9 ವರ್ಷಗಳ ಕಾಲ ಗಂಡ-ಹೆಂಡತಿ ನಡುವೆ ದೈಹಿಕ ಸಂಪರ್ಕವೇ ಇರಲಿಲ್ಲ. ಒಂದು ವರ್ಷದ ಹಿಂದೆ ಗಂಡ ಹಾಗೂ ಪೋಷಕರನ್ನು ತೊರೆದು ಬೆಂಗಳೂರಿಗೆ ಬಂದ ಕಾಟೇರಮ್ಮ, ಎಚ್‌ಎಸ್‌ಆರ್‌ ಲೇಔಟ್‌ನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. 

ಈ ಮಾಹಿತಿ ಪಡೆದ ತಾಯಿ ಸರಸ್ವತಿ ಹಾಗೂ ಸಂಬಂಧಿಕರು ನಗರಕ್ಕೆ ಬಂದು ಕಾಟೇರಮ್ಮನನ್ನು ಮನೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ಆಕೆ ನಿರಾಕರಿಸಿದ್ದರು. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಜ.19ರ ರಾತ್ರಿ ಕಾಟೇರಮ್ಮ ಹಾಗೂ ಸ್ನೇಹಿತೆ ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಕೊಠಡಿಗೆ ಹೋಗುವಾಗ ತಾಯಿ ಸರಸ್ವತಿ ಕಡೆಯವರು ಮುಸುಕು ಧರಿಸಿ ಕಾಟೇರಮ್ಮನನ್ನು ಅಪಹರಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ ಆಟೋ ಚಾಲಕರು ಕೂಡಲೇ ಅಪಹರಣಕಾರರ ಕಾರಿನ ಕೀ ಕಸಿದುಕೊಂಡು ಪೊಲೀಸ್‌ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದಾರೆ.

ಈ ಮಾಹಿತಿ ಪಡೆದ ಕುಮಾರಸ್ವಾಮಿ ಲೇ ಔಟ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ವಿಚಾರಣೆ ನಡೆಸಿದಾಗ, ನನಗೆ 20 ವರ್ಷವಾಗಿದೆ. ತಾಯಿ ಹಾಗೂ ಸಂಬಂಧಿಕರ ಜತೆ ಹೋಗುವುದಿಲ್ಲ. ನನಗೆ ಪ್ರಾಣ ಭಯವಿದೆ. ನನಗೆ ರಕ್ಷಣೆ ಕೊಡುವಂತೆ ಮನವಿ ಮಾಡಿದ್ದಾರೆ.

ಆದರೆ, ಜ.20ರಂದು ಠಾಣೆಗೆ ಬಂದ ಯುವತಿಯ ತಾಯಿ, ಸಹೋದರಿ ಹಾಗೂ ಸಂಬಂಧಿಕರು ಆಕೆಯನ್ನು ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಆದರೆ, ಕಾಟೇರಮ್ಮ ಮಾತ್ರ ನಾನು ಯಾವುದೇ ಕಾರಣಕ್ಕೂ ಅವರೊಂದಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದರು.

ಮತ್ತೂಂದೆಡೆ ಮಗಳನ್ನು ತಮ್ಮೊಂದಿಗೆ ಕಳುಹಿಸದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಸರಸ್ವತಿ ಬೆದರಿಕೆ ಹಾಕಿದ್ದಾರೆ. ಮಹಿಳಾ ಪೊಲೀಸರು ಆಕೆಯನ್ನು ನಿಯಂತ್ರಿಸಲು ಮುಂದಾದರು, ಸಮಾಧಾನಗೊಳ್ಳದೆ, ಪುತ್ರಿಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ.

ಈ ವೇಳೆ ಇಬ್ಬರು ಕಾನ್‌ಸ್ಟೆಬಲ್‌ಗ‌ಳು ಹಾಗೂ ಒಬ್ಬ ಮಹಿಳಾ ಕಾನ್‌ಸ್ಟೆಬಲ್‌ಗ‌ಳು ಆಕೆಯನ್ನು ತಡೆದಿದಲ್ಲದೆ, ನಿಮ್ಮ ಪುತ್ರಿಗೇ ನಿಮ್ಮೊಂದಿಗೆ ಬರಲು ಇಷ್ಟವಿಲ್ಲ. ಆಕೆಗೆ 20 ವರ್ಷವಾಗಿದ್ದು, ಆಕೆಯ ಅನುಮತಿ ಇಲ್ಲದೆ ಯಾರೊಂದಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೂ ಮಹಿಳೆಯರು ಪೊಲೀಸರು ಜತೆ ಮಾತಿಗಿಳಿದಿದ್ದಾರೆ.

ಸಾರ್ವಜನಿಕವಾಗಿ ಹಲ್ಲೆ: ಠಾಣೆಯಲ್ಲಿ ತಾಯಿ-ಮಗಳ ನಡುವೆ ಜಗಳ ನಡೆಯುತ್ತಿದ್ದಾಗ ಆಗಮಿಸಿದ ಎಎಸ್‌ಐ ರೇಣುಕಯ್ಯ ಗಲಾಟೆ ಮಾಡುತ್ತಿದ್ದ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಮಹಿಳೆ ಕೂಗಾಟ ನಿಲ್ಲಿಸದರಿಂದ ಕೋಪಗೊಂಡ ರೇಣುಕಯ್ಯ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಠಾಣೆ ಮುಂಭಾಗದಲ್ಲೇ ಸಾರ್ವಜನಿಕವಾಗಿ ಮಹಿಳೆ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ.

ಇದನ್ನು ಪ್ರಶ್ನಿಸಿದ ಮಹಿಳೆಯ ಸಂಬಂಧಿಕರ ಮೇಲೂ ಇತರೆ ಕಾನ್‌ಸ್ಟೆಬಲ್‌ಗ‌ಳು ಗದರಿದ್ದಾರೆ. ಮಹಿಳಾ ಪೊಲೀಸರು ಘಟನೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳಾ ಸಿಬ್ಬಂದಿ ಬದಲಿಗೆ ಪುರುಷ ಸಿಬ್ಬಂದಿ ಘಟನೆಯಲ್ಲಿ ಭಾಗಿಯಾಗಿರುವ ಔಚಿತ್ಯದ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ.

ಪೊಲೀಸರಿಂದಲೇ ಚಿತ್ರೀಕರಣ: ಮಹಿಳೆಯರು ಮತ್ತು ಪೊಲೀಸ್‌ ಸಿಬ್ಬಂದಿ ನಡುವಿನ ಗಲಾಟೆ ದೃಶ್ಯಗಳನ್ನು ಠಾಣೆಯ ಸಿಬ್ಬಂದಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಹಲ್ಲೆ ದೃಶ್ಯವನ್ನು ಕೂಡ ಸಿಬ್ಬಂದಿ ಸೆರೆ ಹಿಡಿದ್ದರು. ಇದೀಗ ಈ ವಿಡಿಯೋ ವೈರಲ್‌ ಆಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ. ಅಣ್ಣಾಮಲೈ ಘಟನೆ ನಡೆದು ಹತ್ತಾರು ದಿನಗಳು ಕಳೆದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ ಕುರಿತು ಅಧಿಕಾರಿಗಳ ವಿರುದ್ಧ ನೋಟಿಸ್‌ಜಾರಿ ಮಾಡಿದ್ದಾರೆ. 

ಹಲ್ಲೆ ಮಾಡಿದ್ದು ತಪ್ಪು: ಅಪಹರಣಕಾರರಿಂದ ರಕ್ಷಣೆಗೊಳಗಾದ ಕಾಟೇರಮ್ಮನೇ ತಾಯಿ ಸರಸ್ವತಿ ಜತೆ ಹೋಗಲು ನಿರಾಕರಿಸಿದರು. ಇದೇ ವಿಚಾರವಾಗಿ ಪೊಲೀಸರು ಮತ್ತು ಸರಸ್ವತಿ ನಡುವೆ ಜಗಳ ನಡೆದಿದೆ. ಆದರೆ ಘಟನೆಯನ್ನು ಸಮರ್ಥಿಸಿಕೊಳ್ಳದೆ, ಮಹಿಳೆ ಮೇಲೆ ಹಲ್ಲೆ ನಡೆಸಿದ ಎಎಸ್‌ಐ ರೇಣುಕಯ್ಯ ಅವರನ್ನು ಅಮಾನತು ಮಾಡಲಾಗಿದೆ.

ಹಾಗೆಯೇ ಬಲವಂತವಾಗಿ ಪುತ್ರಿಯನ್ನು ಕರೆದೊಯ್ಯಲು ಯತ್ನಿಸಿದ ಸರಸ್ವತಿ ಹಾಗೂ ಸಂಬಂಧಿಕರ ವಿರುದ್ಧ ಈಗಾಗಲೇ ಆಂಧ್ರಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಕುರಿತು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಡಿಸಿಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ. 

ಸಿಸಿಟಿವಿ ಅಳವಡಿಕೆಗೆ ಮನವಿ: ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಅವರಿಗೆ ನಗರದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದೇನೆ. ಈ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳು ನೇರವಾಗಿ ಆಯ ವಲಯದ ಎಸಿಪಿ ಹಾಗೂ ಡಿಸಿಪಿಗಳ ಮೊಬೈಲ್‌ಗ‌ಳಿಗೆ ರವಾನೆಯಾಗಬೇಕು. ಈ ರೀತಿಯ ತಂತ್ರಾಂಶ ಅಳವಡಿಸಲು ಮನವಿ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

ಪೊಲೀಸರ ತಪ್ಪಿಲ್ಲ: ಠಾಣೆಯಲ್ಲಿ ನಮ್ಮ ತಾಯಿಯೇ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಈ ವೇಳೆ ಗರ್ಭಿಣಿ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ರನ್ನು ತಳ್ಳಲು ಯತ್ನಿಸಿದರು. ಆಗ ಎಎಸ್‌ಐ ಅವರು ತಾಯಿಯನ್ನು ಕುತ್ತಿಗೆ ಹಿಡಿದು ಠಾಣೆಯಿಂದ ಹೊರತಳ್ಳಿದರು.

ಇದನ್ನೇ ಎಲ್ಲರೂ ಸೇರಿ ದೊಡ್ಡದು ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಹೋಗುವುದಿಲ್ಲ ಎಂದು ಸರಸ್ವತಿ ಪುತ್ರಿ ಕಾಟೇರಮ್ಮ ತಿಳಿಸಿದ್ದಾರೆ. ಜೊತೆಗೆ ಆಂಧ್ರಪ್ರದೇಶದಲ್ಲಿ ಕಾಟೇರಮ್ಮನ ಹೆಸರಿನಲ್ಲಿ ಸುಮಾರು 10 ಎಕರೆ ಜಮೀನು ಇದ್ದು, ಇದನ್ನು ಆಕೆಯ ತಾಯಿ ಸರಸ್ವತಿ ಹಾಗೂ ಸಂಬಂಧಿಕರು ಕಬಳಿಸಲು ಯತ್ನಿಸಿದ್ದಾರೆ. ಜೊತೆಗೆ ಅಪಹರಣ ಯತ್ನ ಕುರಿತು ದೂರು ದಾಖಲಾಗಿಸಿದ್ದಾರೆ.

ಜಾಮೀನು ಸುಲಭ: ಮಹಿಳೆ ಮೇಲಿನ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ(ಐಪಿಸಿ) 323(ಉದ್ದೇಶಪೂರ್ವಕವಾಗಿ ಹಲ್ಲೆ) ಹಾಗೂ 509(ಮಹಿಳೆಗೆ ಅವಮಾನ ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಈ ಸೆಕ್ಷನ್‌ಗಳಡಿ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿಗೆ ಸುಲಭವಾಗಿ ಜಾಮೀನು ದೊರೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next