ಮೈಸೂರು: ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ‘ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದು ಶಾಸಕ, ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕರನ್ನಾಗಿ ನಮ್ಮ ನಾಯಕರು ನೇಮಕ ಮಾಡುತ್ತಾರೆ.ವಿಧಾನ ಸಭೆಯಲ್ಲಿರೋ 66 ಜನ ಶಾಸಕರಿದ್ದಾರೆ.ಎಲ್ಲರೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ”ಎಂದರು.
”ಜೆಡಿಎಸ್ ಜತೆ ಮೈತ್ರಿ ಆಗಿರಬಹುದು.ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಬೇಕು ಅಂತಾ ಏನೂ ಇಲ್ಲ.ವಿಧಾನಸಭೆಯಲ್ಲಿ ಬಿಜೆಪಿ ಕಾನೂನಾತ್ಮಕವಾಗಿ ವಿರೋಧ ಪಕ್ಷ.ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ” ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನಾನು ಹೃದಯ ತುಂಬಿ ಸ್ವಾಗತ ಮಾಡುತ್ತೇನೆ. ವಿಜಯೇಂದ್ರ ಯುವಕ ಇದ್ದಾರೆ.ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಅದರಲ್ಲಿ ಹಿರಿಯರೂ ಇದ್ದರು.ಆದರೆ ಕಿರಿಯರಿಗೆ ಕೊಡಬಾರದು ಅಂತೇನಿಲ್ಲ.ವಿ.ಸೋಮಣ್ಣ ಪ್ರಭಾವಿ ನಾಯಕರು, ಅವರಿಗೆ ಎಲ್ಲಾ ರೀತಿಯ ಅರ್ಹತೆ ಇತ್ತು.ಸಿ.ಟಿ.ರವಿ ಅವರಿಗೂ ಪಕ್ಷ ಅನೇಕ ಹುದ್ದೆಗಳನ್ನ ನೀಡಿದೆ. ಒಂದೇ ಹುದ್ದೆ ಎಲ್ಲರಿಗೂ ಕೊಡಲಿಕ್ಕೆ ಆಗುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ” ಎಂದರು.
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನಾವೇನು ಪತನ ಮಾಡುವುದಿಲ್ಲ.ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ತಾಯಿ ಚಾಮುಂಡಿ ಶಕ್ತಿ ನೀಡಲಿ.ಆಡಳಿತ ನಡೆಸಿಕೊಂಡು ಹೋಗಲು ದಾರಿ ತೋರಿಸಲಿ.ಅವರ ಪಕ್ಷದಲ್ಲೇ ಸಾಕಷ್ಟು ಒಡಕುಗಳಿವೆ.ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ದಂಡೆ ಇದೆ.ನಾನು ಸಿಎಂ ಆಗುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ .ಅವರ ಪಕ್ಷದಲ್ಲಿ ಅಸಮಾಧಾನಿತರು ಇದ್ದಾರೆ.ಸಿಎಂ ಸಿದ್ದರಾಮಯ್ಯರನ್ನ ಎಲ್ಲರು ಸೇರಿ ಉಡೀಸ್ ಮಾಡುತ್ತಿದ್ದಾರೆ.ಅವರೇ ಆಯ್ಕೆ ಮಾಡಿಕೊಂಡ ಮಂತ್ರಿಗಳು ಅವರ ಮಾತನ್ನೇ ಕೇಳುತ್ತಿಲ್ಲ.ಅಂತವರನ್ನ ಸಚಿವ ಸಂಪುಟದಿಂದ ಆಚೆ ಹಾಕಿದರೆ ಒಳಿತಾಗಬಹುದು” ಎಂದು ಸಲಹೆ ನೀಡಿದರು.
ಒಳ್ಳೆಯ ಬೆಳವಣಿಗೆ
”ಎಲ್ಲಾ ಕ್ಷೇತ್ರದಲ್ಲೂ ಯುವಕರಿಗೆ ಮಣೆ ಹಾಕಲಾಗುತ್ತಿದೆ.ಬಿಜೆಪಿ ಯುವ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ವಿಜಯೇಂದ್ರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿದ್ದರು.ರಾಜ್ಯ ಉಪಾಧ್ಯಕ್ಷರಾಗಿದ್ದವರು.ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ.ಅವರ ಅನುಭವ ಮಾರ್ಗದರ್ಶನ ವಿಜಯೇಂದ್ರಗೆ ಸಿಗುವುದರಿಂದ ಸಂಘಟನೆಯಲ್ಲಿ ಯಶಸ್ವಿ ಆಗುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ಹೆಸರಿನಲ್ಲೇ ನಾವೆಲ್ಲರೂ ಗೆದ್ದು ಬಂದಿದ್ದೇವೆ. ಮುಂದಿನ ಚುನಾವಣೆಯಲ್ಲಿಯೂ ಮೋದಿಯವರ ಹೆಸರಿನಲ್ಲೇ ಗೆಲ್ಲಲಿದ್ದೇವೆ.ಮುಂದಿನ ಚುನಾವಣೆಯಲ್ಲೂ ಬಿಜೆಪಿ ಬಹುಮತ ಗಳಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ” ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.