Advertisement

ಹೈಕೋರ್ಟ್‌ ರಿಜಿಸ್ಟ್ರಾರ್‌ ಕರೆಸಿ ಕಾರಣ ಕೇಳಿ…

03:45 AM Feb 11, 2017 | |

ವಿಧಾನಸಭೆ: ನ್ಯಾಯಮೂರ್ತಿಗಳು, ನ್ಯಾಯಾಧೀಶರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ನೀಡಬಾರದೆಂಬ ಹೈಕೋರ್ಟ್‌ ಸುತ್ತೋಲೆ ಮತ್ತೆ ಸದನದಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಈ ಕುರಿತು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರನ್ನು ಕರೆಯಿಸಿ ಕಾರಣ ಕೇಳಬೇಕೆಂಬ ಒತ್ತಾಯ ಕೇಳಿಬಂತು.

Advertisement

ನ್ಯಾಯಾಧೀಶರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಮುನ್ನ ಅವರ ಪೂರ್ವಾಪರ ಪರಿಶೀಲಿಸಬೇಕು
ಎಂದು ಹೇಳುವ ನ್ಯಾಯಮೂರ್ತಿಗಳೇನು ಸಾಚಾ ಇದ್ದಾರೆಯೇ? ಶಾಸನ ರೂಪಿಸುವ ಸಭೆಗೆ ಆಯ್ಕೆಯಾದವರು ನ್ಯಾಯಾಂಗಕ್ಕೆ
ಬೇಡ ಎಂದಾದರೆ ಅವರಿಗೆ ನಾವೇಕೆ ನೆರವು ನೀಡಬೇಕು. ಮೊದಲು ನ್ಯಾಯಾಂಗಕ್ಕೆ ಅನುದಾನ ನೀಡುವುದನ್ನು ನಿಲ್ಲಿಸಿ. ಆಗ ನಮ್ಮ
ಅಗತ್ಯ ಅವರಿಗೆ ಅರಿವಾಗುತ್ತದೆ ಎಂದು ಸದಸ್ಯರು ಪಕ್ಷಬೇಧ ಮರೆತು ಕಿಡಿ ಕಾರಿದರು.

ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಈ ವಿಚಾರದ ಕುರಿತು ಈಗಾಗಲೇ ಹೈಕೋರ್ಟ್‌ ಮುಖ್ಯ
ನ್ಯಾಯಮೂರ್ತಿಗಳ ಜತೆಗೆ ಚರ್ಚಿಸಿ ಸದನದ ಭಾವನೆಯನ್ನು ತಿಳಿಸಿದ್ದೇನೆ. ಸುತ್ತೋಲೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದೇನೆ. ನ್ಯಾಯಾಂಗವು ಸಂವಿಧಾನದ ಒಂದು ಅಂಗವಾಗಿರುವುದರಿಂದ ಅದಕ್ಕೆ ಮೂಲಕ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅನುದಾನ ನಿಲ್ಲಿಸುವುದು ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ವಿಚಾರದಲ್ಲಿ ಸಂಘರ್ಷ ಬೇಡವೆಂದು ಹೇಳಿದರು.

ಬಿಎಸ್‌ವೈ ಜೈಲಿಗೆ ಕಳುಹಿಸಿದವರಿಗೇನು ಶಿಕ್ಷೆ? 
ಬಿ.ಎಸ್‌.ಯಡಿಯೂರಪ್ಪ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಾದ-ಪ್ರತಿವಾದ, ಆರೋಪಪಟ್ಟಿ ಇಲ್ಲದೆ ಅವರನ್ನು 23 ದಿನ ಜೈಲಿಗೆ ಕಳುಹಿಸಲಾಯಿತು. ನಂತರ ಅದೇ ಕೋರ್ಟ್‌ ಅವರ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿ ಪ್ರಕರಣವನ್ನೇ ರದ್ದುಗೊಳಿಸಿತು. ಆದರೆ, ಅನಗತ್ಯವಾಗಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದರಲ್ಲಾ, ಅವರಿಗೇನು ಶಿಕ್ಷೆ?
ನ್ಯಾಯಮೂರ್ತಿಗಳು, ನ್ಯಾಯಾಧೀಶರು ಪಾಲ್ಗೊಳ್ಳುವ ಕಾರ್ಯ ಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವಾಗ ಅವರ ಪೂರ್ವಾಪರ ವಿಚಾರಿಸಬೇಕೆಂಬ ಹೈಕೋರ್ಟ್‌ ಸುತ್ತೋಲೆ ಬಗ್ಗೆ ಯಡಿಯೂರಪ್ಪ ಅವರ ಪ್ರಕರಣವನ್ನು ಉದಾಹರಿಸಿ ಕಿಡಿ ಕಾರಿದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ ಮಾತ್ರಕ್ಕೆ ಯಾರೇ ಆಗಲಿ ಅಪರಾಧಿಗಳಾಗುವುದಿಲ್ಲ ಎಂಬ ವಿಷಯವೂ ನ್ಯಾಯಾಂಗದಲ್ಲಿರುವವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next