Advertisement

ನಾವಾಗೇ ಏನನ್ನೂ ಕೇಳಿ ಹಾಕಿಸಿಕೊಳ್ಳಬಾರದು

11:27 AM Feb 25, 2017 | |

ರವಿಚಂದ್ರನ್‌ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ? “ಹೆಬ್ಬುಲಿ’. “ಹೆಬ್ಬುಲಿ’ ಚಿತ್ರ ಗುರುವಾರ ರಿಲೀಸ್‌ ಆಗಿದೆ. ಸುದೀಪ್‌ ಜತೆಗೆ ರವಿಚಂದ್ರನ್‌ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಸುದೀಪ್‌ ಅವರ ಕಟೌಟ್‌ ಮಾತ್ರ ನಿಂತಿದೆ. ರವಿಚಂದ್ರನ್‌ ಅವರ ಕಟೌಟ್‌ ಅಲ್ಲಿ ಕಾಣುತ್ತಿಲ್ಲ. ಇದು ರವಿಚಂದ್ರನ್‌ ಅಭಿಮಾನಿಗಳಿಗೆ ತಂದ ಬೇಸರ ಮತ್ತು ಕೋಪ.

Advertisement

“ಮಾಣಿಕ್ಯ’ ಚಿತ್ರ ರಿಲೀಸ್‌ ಆದಾಗಲೂ ರವಿಚಂದ್ರನ್‌ ಅವರ ಕಟೌಟ್‌ಗೆ ಹಾರಗಳು ಬಿದ್ದಿರಲಿಲ್ಲ. ಆಗಲೂ ರವಿಚಂದ್ರನ್‌ ಅಭಿಮಾನಿಗಳು ಮುನಿಸಿಕೊಂಡಿದ್ದರು. ಈಗ “ಹೆಬ್ಬುಲಿ’ ಚಿತ್ರ ರಿಲೀಸ್‌ ಆದಾಗಲೂ ರವಿಚಂದ್ರನ್‌ ಅವರ ಕಟೌಟೇ ಇಲ್ಲ ಅನ್ನುವುದು ಅವರ ಅಸಮಾಧಾನಕ್ಕೆ ಬಲವಾದ ಕಾರಣ. ಈ ಬಗ್ಗೆ ಅಭಿಮಾನಿಗಳು ದೂರು ಹೊತ್ತುಕೊಂಡು ರವಿಚಂದ್ರನ್‌ ಮನೆಗೆ ಹೋಗಿದ್ದೂ ಆಗಿದೆ. ರವಿಚಂದ್ರನ್‌ ಅಭಿಮಾನಿಗಳಿಗೇ ಸಮಾಧಾನ ಮಾಡಿ, ಕಳುಹಿಸಿದ್ದೂ ಆಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರವಿಚಂದ್ರನ್‌ ಹೇಳ್ಳೋದೇನು ಗೊತ್ತಾ? “ನಾವಾಗಿಯೇ ಏನನ್ನೂ ಕೇಳಿ ಹಾಕಿಸಿಕೊಳ್ಳಬಾರದು. ಅದು ಅವರಿಗೇ ಗೊತ್ತಾಗಬೇಕು. ನನ್ನ ಕೊಡುಗೆ ಏನೆಂಬುದನ್ನು ಅವರೇ ಅರ್ಥ ಮಾಡ್ಕೊàಬೇಕು. ಥಿಯೇಟರ್‌ ಮುಂದೆ ಹಿಂದೆಲ್ಲಾ ಕಟೌಟ್‌ ಇದ್ದರೂ, ಸಿನಿಮಾ ಮಾತಾಡುತ್ತಿತ್ತು. 60 ಅಡಿ, 100 ಅಡಿ ಕಟೌಟ್‌ ಇರೋದು ಮುಖ್ಯ ಅಲ್ಲ. ಅಂತಹ ಕಟೌಟ್‌ನಿಂದಾಗಿ ನನಗೇನೂ ಲಾಭ ಇಲ್ಲ.

ನಾನೇ ನನ್ನ ಫ್ಯಾನ್ಸ್‌ಗೆ ಬೈದು ಕಳಿಸಿದ್ದೇನೆ. ಹಾಕಿದರೆ ಹಾಕಲಿ, ಇಲ್ಲವಾದರೆ ಬಿಡಲಿ, ನೀವು ಸುಮ್ಮನಿರಿ ಅಂತ ಹೇಳಿ ಕಳುಹಿಸಿದ್ದೇನೆ’ ಎಂದಷ್ಟೇ ಹೇಳಿ ಕಟೌಟ್‌ ವಿಷಯವನ್ನು ಪಕ್ಕಕ್ಕಿಡುತ್ತಾರೆ ರವಿಚಂದ್ರನ್‌. ಅಂದಹಾಗೆ, ರವಿಚಂದ್ರನ್‌ ಅವರು ಇಷ್ಟು ಮಾತಾಡಿದ್ದು ತಮ್ಮದೇ ಅಭಿನಯದ ಮೂರು ಚಿತ್ರಗಳ ಮುಹೂರ್ತ ಸಮಾರಂಭದಲ್ಲಿ. ಶಿವರಾತ್ರಿ ದಿನದಂದು ರವಿಚಂದ್ರನ್‌ ಅಭಿನಯದ ಮೂರು ಚಿತ್ರಗಳಿಗೆ ಮುಹೂರ್ತ ನಡೆದಿದೆ.

“ದಶರಥ’, “ರಾಜೇಂದ್ರ ಪೊನ್ನಪ್ಪ’ ಮತ್ತು “ಬಕಾಸುರ’ ಚಿತ್ರಗಳಿಗೆ ಒಟ್ಟಿಗೆ ಮುಹೂರ್ತ ಮಾಡೋದ್ದಕ್ಕೂ ಬಲವಾದ ಕಾರಣವಿದೆ. ಆ ಕಾರಣವನ್ನು ರವಿಚಂದ್ರನ್‌ ವಿವರಿಸೋದು ಹೀಗೆ. “ಮೂರು ಚಿತ್ರಗಳ ಮುಹೂರ್ತವನ್ನು ಒಟ್ಟಿಗೆ ನೆರವೇರಿಸಲು ಕಾರಣವಿದೆ. ಇದಕ್ಕೂ ಮುನ್ನ, ಒಂದೊಂದು ಸಿನಿಮಾವನ್ನು ಒಂದೊಂದು ಡೇಟ್‌ನಲ್ಲಿ ಮುಹೂರ್ತ ಮಾಡಬೇಕಿತ್ತು. ಆದರೆ, ಒಟ್ಟಿಗೆ ಮಾಡಬೇಕು ಎಂಬ ಆಸೆ ನನ್ನದಾಗಿತ್ತು. ಅದಕ್ಕೆ ಮುಖ್ಯವಾದ ಕಾರಣ.

Advertisement

ಕೆಲವು ವರ್ಷಗಳ ಹಿಂದೆ ಶಿವನ ಆರಾಧನೆ ಮಾಡುತ್ತಿದ್ದೆ. ಆಗಿನಿಂದ ಶಿವನ ಮೇಲೆ ಇನ್ನಷ್ಟು ಭಕ್ತಿ ಜಾಸ್ತಿಯಾಯ್ತು. ಹಾಗಾಗಿ ಮೂರು ಚಿತ್ರಗಳ ಪೋಸ್ಟರ್ ಮೇಲೂ “ವಿತ್‌ ದ ಬ್ಲೆಸಿಂಗ್ಸ್‌ ಆಫ್ ಲಾರ್ಡ್‌ ಶಿವ’ ಎಂದು ಹೆಸರು ಹಾಕಿಸಿಯೇ, ಸಿನಿಮಾ ಮುಹೂರ್ತವನ್ನು  ಶಿವರಾತ್ರಿ ಹಬ್ಬದ ದಿನದಂದೇ ಮಾಡಬೇಕು ಎಂದು ತೀರ್ಮಾನಿಸಿದೆ. ಶಿವರಾತ್ರಿಯಂದೇ ನೆರವೇರಿದೆ. ಪಾಸಿಟಿವ್‌ ಎನರ್ಜಿ ಸಿಕ್ಕಿದೆ. ಶಿವನ ಸನ್ನಿಧಿಯಲ್ಲಿ ಶುರು ಮಾಡಬೇಕೆಂಬ ಆಸೆ ಈಡೇರಿದೆ. ಮೊದಲಿನಿಂದಲೂ ಜನರು ನನ್ನೊಂದಿಗಿದ್ದಾರೆ. ಈಗಲೂ ಇದ್ದಾರೆ. ಮುಂದೆಯೂ ಇರ್ತಾರೆ.

“ರಾಜೇಂದ್ರ ಪೊನ್ನಪ್ಪ’, “ದಶರಥ’, “ಬಕಾಸುರ’ ಈ ಮೂರು ಚಿತ್ರಗಳು ಸ್ವಮೇಕ್‌’ ಎನ್ನುತ್ತಾರೆ ರವಿಚಂದ್ರನ್‌. ದೃಶ್ಯಂ ಪಾತ್ರವೇ ಸಿನಿಮಾ ಆಗೋಯ್ತು: “ದಶರಥ’ ಚಿತ್ರಕ್ಕೆ ಎಂ.ಎಸ್‌.ರಮೇಶ್‌ ನಿರ್ದೇಶಕರು. ಈ ಚಿತ್ರದಲ್ಲಿ ರವಿಚಂದ್ರನ್‌ ಲಾಯರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. “ನಾನು “ಯುದ್ಧಕಾಂಡ’ ಬಳಿಕ ಫ‌ುಲ್‌ಫಾರ್ಮ್ನಲ್ಲಿ ಲಾಯರ್‌ ಆಗಿ ಕಾಣಿಸಿಕೊಂಡಿರಲಿಲ್ಲ. ಇಲ್ಲಿ ಪ್ರಸಕ್ತ ವಿಷಯಗಳಿವೆ. ರೆಗ್ಯುಲರ್‌ ಫ್ಯಾಮಿಲಿ ಟಚ್‌ ಕೂಡ ಇದೆ. ಇಲ್ಲೂ ಮೂವರು ಹುಡುಗಿಯರು ಬಂದು ಹೋಗುತ್ತಾರೆ.

ಇನ್ನು, ಶ್ರೀ ಈಶ್ವರಿ ಪ್ರೊಡಕ್ಷನ್ಸ್‌ನಲ್ಲಿ ತಯಾರಾಗುತ್ತಿರುವ “ರಾಜೇಂದ್ರ ಪೊನ್ನಪ್ಪ’ ಅಪ್ಪ, ಮಗಳ ಕಥೆ ಹೊಂದಿದೆ. ಈ ಚಿತ್ರಕ್ಕೆ ಮೊದಲು “ಪಪ್ಪಾ’ ಎಂದು ಹೆಸರಿಡಬೇಕಿತ್ತು. ಆದರೆ, ಅದು ಬೇರೆ ಬ್ಯಾನರ್‌ನಲ್ಲಿ ನೋಂದಣಿಯಾಗಿದ್ದರಿಂದ “ದೃಶ್ಯಂ’ ಚಿತ್ರದ ಪಾತ್ರದ ಹೆಸರು “ರಾಜೇಂದ್ರ ಪೊನ್ನಪ್ಪ’ ಎಂಬುದು ಜನಜನಿತವಾಗಿತ್ತು. ಅದನ್ನೇ ಇಲ್ಲಿ ಇಡಲಾಗಿದೆ. ನಾನು ರವಿಚಂದ್ರನ್‌ ಆಗಿ ಗುರುತಿಸಿಕೊಳ್ಳಲು ಇಷ್ಟಪಡಲ್ಲ. ಒಂದು ಚಿತ್ರದ ಪಾತ್ರವಾಗಿ ಗುರುತಿಸಿಕೊಳ್ಳಲು ಇಷ್ಟಪಡ್ತೀನಿ. ಅಪ್ಪ, ಮಗಳ ಕಥೆಯಲ್ಲಿ ಇನ್ನೊಂದು ಫೀಮೇಲ್‌ ಲೀಡ್‌ ಪಾತ್ರವೂ ಇದೆ. ಅದು ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬಂದು ಹೋಗಲಿದೆ.

“ಬಕಾಸುರ’ ಕೂಡ ಥ್ರಿಲ್ಲರ್‌ ಬೇಸ್ಡ್ ಸಿನಿಮಾ. ರೋಹಿತ್‌ ಪ್ರೊಡಕ್ಷನ್ಸ್‌ನಲ್ಲಿ “ಕರ್ವ’ ನಿರ್ದೇಶಿಸಿದ್ದ ನವನೀತ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ದಶರಥ’ ಮತ್ತು “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಲಾಯರ್‌ ಪಾತ್ರವಿದೆ. ಕ್ಲಾಷ್‌ ಆಗಬಾರದು ಎಂಬ ಕಾರಣಕ್ಕೆ ಮನೆಯಲ್ಲೇ ಒಟ್ಟಿಗೆ ಕುಳಿತು, ಚರ್ಚೆ ನಡೆಸಿ ಕಥೆ ಹೆಣೆಯಲಾಗಿದೆ’ ಎನ್ನುತ್ತಾರೆ ಅವರು. ವಿಶೇಷವೆಂದರೆ, ಈ ಮೂರು ಚಿತ್ರಗಳ ಚಿತ್ರೀಕರಣ ಒಮ್ಮೆಲೆ ನಡೆಯಲಿದೆ. ಒಂದೊಂದು ಚಿತ್ರಕ್ಕೆ ಇಂತಿಷ್ಟು ದಿನ ಅಂತ ಡೇಟ್‌ ಅಡೆಸ್ಟ್‌ ಮಾಡಿ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲು ರೆಡಿಯಾಗಿದ್ದಾರೆ ರವಿಚಂದ್ರನ್‌.

ಅಪ್ಪ ನಾನೂ ದುಡಿದು ತರ್ತಿನಿ: ರವಿಚಂದ್ರನ್‌ ಹೀಗೆ ಮೂರು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಅವರ ಮಗ ಮನೋರಂಜನ್‌ ಚಿತ್ರವನ್ನು ಯಾವಾಗ ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ರವಿಚಂದ್ರನ್‌ ಹೇಳ್ಳೋದು ಹೀಗೆ.  “ನನ್ನ  ಮಗ ಒಮ್ಮೆ ಹೇಳಿದ. ನೀವು ಸಿನಿಮಾ ಮಾಡಿದರೆ, ಅದು ನಿಮ್ಮ ಸಿನಿಮಾ ಆಗುತ್ತೆ. ಈಗ ನೀವು ಬಿಜಿಯಾಗಿದ್ದೀರಿ. ಹಾಗಾಗಿ, ನಾನು ಬೇರೆ ಸಿನಿಮಾ ಅವಕಾಶ ಬಂದರೆ ಮಾಡ್ತೀನಿ. ನಾನೂ ಕೂಡ ದುಡಿದು ತರ್ತಿನಿ.

ನನ್ನ ಕೊಡುಗೆಯನ್ನೂ ಕೊಡ್ತೀನಿ. ಆಮೇಲೆ ಸಿನಿಮಾ ಮಾಡೋಣ’ ಅಂತ ಮನೋರಂಜನ್‌ ಹೇಳಿದ್ದ. ನನಗೂ ಅವನ ಮಾತು ಸರಿ ಎನಿಸಿತು. ಅವನು ಹೊರಗೆ ಹೋಗಿ ಬಂದರೆ ಎಲ್ಲವೂ ಅರ್ಥವಾಗುತ್ತೆ ಅಂದುಕೊಂಡೆ. ನನಗೆ ಗೊತ್ತಿರೋರೇ ಸಿನಿಮಾ ಮಾಡ್ತೀನಿ ಅಂತ ಬಂದ್ರು, ಕಳಿಸಿಕೊಟ್ಟೆ. ಮಗನಿಗೆ ಒಂದೊಳ್ಳೆಯ ಸಿನಿಮಾ ಮಾಡ್ತೀನಿ. ಈಗ “ಸಾಹೇಬ’ ಚಿತ್ರ ಮುಗಿದು, ರಿಲೀಸ್‌ಗೆ ರೆಡಿಯಾಗಿದೆ. “ವಿಐಪಿ’ ಶೂಟಿಂಗ್‌ ನಡೆಯುತ್ತಿದೆ’ ಎನ್ನುತ್ತಾರೆ ರವಿಚಂದ್ರನ್‌.

Advertisement

Udayavani is now on Telegram. Click here to join our channel and stay updated with the latest news.

Next