ಉಲಾನ್ಬಾತರ್ (ಮಂಗೋಲಿಯ): ಚಿನ್ನದ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಎಡವಿದ ಭಾರತದ ಅನ್ಶು ಮಲಿಕ್ ಮತ್ತು ರಾಧಿಕಾ ಅವರು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
62 ಕೆ.ಜಿ. ವಿಭಾಗದಲ್ಲಿ ಮನೀಷಾ ಕಂಚಿನ ಪದಕ ಗೆದ್ದಿದ್ದಾರೆ.57 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಅನ್ಶು ಅವರು ಜಪಾನಿನ ಟಿಸುಗುಮಿ ಸಕುರೈ ಅವರೆದುರು ಶರಣಾದರು. ಈ ಮೊದಲು ನಡೆದ ಮೂರು ಕಾದಾಟಗಳಲ್ಲಿ 20ರ ಹರೆಯದ ಹಾಲಿ ಚಾಂಪಿಯನ್ ಆಗಿರುವ ಹರಿಯಾಣದ ನಿದಾನಿ ಗ್ರಾಮದ ಅನ್ಶು ಅವರು ತಾಂತ್ರಿಕವಾಗಿ ಪ್ರಾಬಲ್ಯ ಸ್ಥಾಪಿಸಿ ಗೆಲುವು ಸಾಧಿಸಿ ಚಿನ್ನದ ಪದಕದ ಸುತ್ತಿಗೇರಿದ್ದರು.
65 ಕೆ.ಜಿ. ವಿಭಾಗದಲ್ಲಿ ರಾಧಿಕಾ ಬೆಳ್ಳಿಯ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಐದನೇ ಸುತ್ತಿನ ಹೋರಾಟದಲ್ಲಿ ಕಜಾಕ್ಸ್ಥಾನದ ದರಿಕಾ ಅಬೆನ್ ವಿರುದ್ಧ ಜಯ ಸಾಧಿಸಿದ ರಾಧಿಕಾ ಅಂತಿಮವಾಗಿ ಬೆಳ್ಳಿಯ ಪದಕ ಜಯಿಸಿದರು.
ಕೊರಿಯದ ಹ್ಯಾನಿಟ್ ಲೀ ಅವರೆದುರು ಸೋತ ಮನೀಷಾ ಕಂಚು ಗೆದ್ದರು. 62 ಕೆ.ಜಿ. ವಿಭಾಗದಲ್ಲಿ ದೇಶೀಯ ಸ್ಪರ್ಧೆಗಳಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದ್ದ ಮನೀಷಾ ಕೇವಲ 40 ನಿಮಿಷಗಳಲ್ಲಿ ಜಪಾನಿಯ ನೊನೊಕಾ ಒಜಾಕಿ ಅವರೆದುರು ಸೋತು ಚಿನ್ನದ ಸುತ್ತಿಗೇರಲು ವಿಫಲರಾಗಿದ್ದರು.
Related Articles
ಅನ್ಶು ಶ್ರೇಷ್ಠ ನಿರ್ವಹಣೆ
ಕಳೆದ ವರ್ಷ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ ಫೈನಲಿಗೇರಿದ ನಾರತದ ಮೊದಲ ವನಿತೆ ಎಂಬ ಗೌರವಕ್ಕೆ ಪಾತ್ರರಾಗಿದ್ದ ಅನ್ಶು ಮೊದಲ ಸುತ್ತಿನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. ಮೊದಲ ಸುತ್ತಿನಲ್ಲಿ ಉಜ್ಬೆಕಿಸ್ಥಾನದ ಶೋಖೀಡಾ ಅವರನ್ನು ಉರುಳಿಸಿದ ಅನ್ಶು ಮುಂದಿನ ಹೋರಾಟದಲ್ಲಿ ಸಿಂಗಾಪುರದ ಡ್ಯಾನಿಯೆಲ್ ಸುಯಿ ಚಿಂಗ್ ಲಿಮ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಅನ್ಶು ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಕು ಅವರನ್ನು ಮಣಿಸಿ ಚಿನ್ನದ ಪದಕದ ಸುತ್ತಿಗೆ ತಲುಪಿದ್ದರು.