ದೋಹಾ: ಭಾರತದ ದೀಪಕ್ ಕುಮಾರ್ ಅವರು 14ನೇ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರಲ್ಲದೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.
ಕೂಟದ ಮೊದಲ ದಿನವೇ ನಡೆದ ಈ ಸ್ಪರ್ಧೆಯ ಫೈನಲ್‌ನಲ್ಲಿ ದೀಪಕ್ 227.8 ಅಂಕ ಗಳಿಸುವ ಮೂಲಕ ಕಂಚಿನ ಪದಕ ಗೆದ್ದರು. ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ 10ನೇ ಶೂಟರ್ ಎಂದೆನಿಸಿಕೊಂಡಿದ್ದಾರೆ.
ಕಳೆದ ವರ್ಷ ಗ್ವಾಡಲಾಜರಾದಲ್ಲಿ ನಡೆದ 2018ರ ಐಎಸ್‌ಎಸ್‌ಎಫ್ ವಿಶ್ವ ಕಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ದೀಪಕ್ ಇಲ್ಲಿ ಪ್ರಾಥಮಿಕ ಹಂತದಲ್ಲಿ 626.8 ಅಂಕ ಗಳಿಸುವ ಮೂಲಕ ಎಂಟು ಸ್ಪರ್ಧಿಗಳ ಫೈನಲ್ ಸುತ್ತಿಗೆ ಮೂರನೆಯವರಾಗಿ ತೇರ್ಗಡೆಯಾಗಿದ್ದರು.
ಅತ್ಯಂತ ಅನುಭವಿ ಶೂಟರ್ ಆಗಿರುವ ದೀಪಕ್ ಫೈನಲ್‌ನಲ್ಲಿ ನಿರೀಕ್ಷೆ ಯಂತೆ ಉತ್ತಮ ಆಟದ ಪ್ರದರ್ಶನ ನೀಡಿ ಕಂಚು ಗೆದ್ದರು. ಚೀನದ ಯುಕುನ್ ಲಿಯು ಚಿನ್ನ ಜಯಿಸಿದ್ದರೆ ಹಾನನ್ ಯು ಬೆಳ್ಳಿ ಗೆದ್ದರು.
ದೀಪಕ್ 10 ಮೀ. ಏರ್ ರೈಫಲ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಎರಡನೇ ಶೂಟರ್ ಆಗಿದ್ದಾರೆ.
ಭಾಕರ್‌ಗೆ ಚಿನ್ನ
ಏಶ್ಯನ್ ಶೂಟಿಂಗ್‌ನ ವನಿತೆಯರ 10ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತದ ಮನು ಭಾಕರ್ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಭಾಕರ್ 244.3 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿದ್ದಾರೆ. ಅವರು ಕಳೆದ ಮೇ ತಿಂಗಳಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡಿದ್ದರು.