ಹ್ಯಾಂಗ್‌ಝೂ (ಚೀನ): ಏಷ್ಯನ್ ಪ್ಯಾರಾ ಗೇಮ್ಸ್‌ನ ಬುಧವಾರದ ಸ್ಪರ್ಧೆಗಳಲ್ಲಿ ಭಾರತ ಎರಡು ಡಜನ್ ಪದಕಗಳನ್ನು ಬೇಟೆಯಾಡಿದೆ. ಇದರಲ್ಲಿ 6 ಚಿನ್ನದ ಪದಕಗಳಿದ್ದವು. ಈ ಆರೂ ಚಿನ್ನಗಳು ಆ್ಯತ್ಲೆಟಿಕ್ಸ್‌ನಲ್ಲಿ ಒಲಿದವು. ಭಾರತದ ಪದಕಗಳ ಸಂಖ್ಯೆ 58ಕ್ಕೆ ಏರಿತು (15 ಚಿನ್ನ, 20 ಬೆಳ್ಳಿ, 23 ಕಂಚು).
ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಅಂತಿಲ್ ಎಫ್64 ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಅವರ 73.29 ಮೀಟರ್‌ಗಳ ಸಾಧನೆ ನೂತನ ವಿಶ್ವದಾಖಲೆ ಆಗಿತ್ತು. ಇದರೊಂದಿಗೆ ಅವರು ತಮ್ಮದೇ ದಾಖಲೆಯನ್ನು ಮುರಿದರು (70.83 ಮೀ.).
ಅಂಕುರ್ ಧಾಮ ಏಷ್ಯನ್ ಪ್ಯಾರಾ ಗೇಮ್ಸ್ ಒಂದರಲ್ಲಿ ಅವಳಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದರು. ಬುಧವಾರ ಅವರು ಪುರುಷರ ಟಿ11 1,500 ಮೀ. ರೇಸ್‌ನಲ್ಲಿ ಬಂಗಾರ ಗೆದ್ದರು. ಇದಕ್ಕೂ ಮೊದಲು ಟಿ11 5,000 ಮೀ. ರೇಸ್‌ನಲ್ಲೂ ಸ್ವರ್ಣಸಾಧನೆಗೈದಿದ್ದರು.
ಪುರುಷರ ಎಫ್46 ಜಾವೆಲಿನ್ ಎಸೆತದಲ್ಲಿ ಸುಂದರ್ ಸಿಂಗ್ ಗುರ್ಜಾರ್ ಕೂಡ ವಿಶ್ವದಾಖಲೆ ಸ್ಥಾಪಿಸಿದರು (68.60 ಮೀ.). ಈ ಸಂದರ್ಭದಲ್ಲಿ ಅವರು ಶ್ರೀಲಂಕಾದ ದಿನೇಶ್ ಮುದಿಯನ್ಸೆಲಗೆ ಅವರ ದಾಖಲೆ ಮುರಿದರು (67.79 ಮೀ.).
ವನಿತೆಯರ ಟಿ11 1,500 ಮೀ. ರೇಸ್‌ನಲ್ಲಿ ರಕ್ಷಿತಾ ರಾಜು ಚಿನ್ನ ಗೆದ್ದರು. ರಕ್ಷಿತಾ 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಸ್ವರ್ಣ ಸಾಧನೆಗೈದಿದ್ದರು. ಪುರುಷರ ಎಫ್37/38 ಜಾವೆಲಿನ್ ಸ್ಪರ್ಧೆಯಲ್ಲಿ ಹ್ಯಾನಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರಕ್ಕೆ ಕೊರಳೊಡ್ಡಿದರು.