ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್ ಅವರು ಐತಿಹಾಸಿಕ ಪದಕ ಗೆದ್ದಿದ್ದಾರೆ. ರವಿವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಅವರು ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಗಾಲ್ಫ್ ಕ್ರೀಡೆಯಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತಾ ಕ್ರೀಡಾಪಟು ಎಂಬ ದಾಖಲೆಗೆ ಬೆಂಗಳೂರಿನ ಅದಿತಿ ಅಶೋಕ್ ಪಾತ್ರರಾಗಿದ್ದಾರೆ.
ಅದಿತಿ ಅಶೋಕ್ 7-ಸ್ಟ್ರೋಕ್ ಮುನ್ನಡೆಯೊಂದಿಗೆ ಆಟವನ್ನು ಪ್ರಾರಂಭಿಸಿದರು. ಅವರಿಗೆ ಚಿನ್ನ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಕೊನೆಯ ಎರಡು ಮೂರು ಹೊಡೆತದಲ್ಲಿ ಹಿನ್ನಡೆ ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಥಾಯ್ಲೆಂಡ್ ನ ಅರ್ಪಿಚಯಾ ಯುಬೋಲ್ ಅವರು ಚಿನ್ನದ ಪದಕವನ್ನು ಪಡೆದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದ ಅದಿತಿ ಅಶೋಕ್ ಇದೀಗ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ವಿಕ್ರಂಗೆ ತಪ್ಪಿದ ಕಂಚು: ರೋಲರ್ ಸ್ಕೇಟಿಂಗ್ ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ವಿಕ್ರಂ ಇಂಗಳೆ ನಾಲ್ಕನೇ ಸ್ಥಾನ ಪಡೆದರು. ಅತ್ಯಂತ ಸಣ್ಣ ಅಂತರದಲ್ಲಿ ಕಂಚಿನ ಪದಕ ಕೈ ತಪ್ಪಿತು.