Advertisement
ಭಾರತೀಯ ಆರ್ಚರಿ ಫೆಡರೇಶನ್ ಅನ್ನು ಅಮಾನತು ಮಾಡಿರುವುದರಿಂದ ಭಾರತೀಯ ಬಿಲ್ಗಾರರು ತಟಸ್ಥ ಆಟಗಾರರಾಗಿ ವಿಶ್ವ ಆರ್ಚರಿ ಧ್ವಜದಡಿ ಇಲ್ಲಿ ಸ್ಪರ್ಧಿಸುತ್ತಿದ್ದಾರೆ.
ಭರ್ಜರಿ ಪ್ರದರ್ಶನ ನೀಡಿದ ಅತನು ದಾಸ್ ಮೂರು ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಬೆಳಗ್ಗೆ ಪುರುಷರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಅವರು ಕೊರಿಯದ ಜಿನ್ ಹಯೆಕ್ ಓಹ್ ಅವರನ್ನು 6-5 ಅಂತರದಿಂದ ಉರುಳಿಸಿ ಕಂಚು ಪಡೆದರು. ಸೋಮವಾರ ದೀಪಿಕಾ ಕುಮಾರಿ ಜತೆ ರಿಕರ್ವ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದ ದಾಸ್ ಆಬಳಿಕ ರಿಕರ್ವ್ ತಂಡ ವಿಭಾಗದಲ್ಲಿ ಇನ್ನೊಂದು ಕಂಚು ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಹಿರಿಯ ಬಿಲ್ಗಾರರಾದ ತರುಣ್‌ದೀಪ್ ರಾಯ್ ಮತ್ತು ಜಯಂತ್ ತಾಲೂಕ್‌ದಾರ್ ಜತೆಗೂಡಿ ಆಡಿದ ದಾಸ್ ಚೀನ ಜೋಡಿಯನ್ನು 6-2 ಅಂತರದಿಂದ ಸೋಲಿಸಿ ಕಂಚಿನ ಪದಕ ಜಯಿಸಿದರು. ಇದೇ ವೇಳೆ ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬಾಲ್ಯ ದೇವಿ ಮತ್ತು ಅಂಕಿತಾ ಭಕತ್ ಅವರನ್ನು ಒಳಗೊಂಡ ವನಿತಾ ರಿಕರ್ವ್ ತಂಡ ಜಪಾನ್ ತಂಡವನ್ನು 5-1 ಅಂತರದಿಂದ ಉರುಳಿಸಿ ಇನ್ನೊಂದು ಕಂಚು ಪಡೆ ಯಿತು. ಭಾರತೀಯ ತಂಡ ಈ ಮೊದಲು ಸೆಮಿಯಲ್ಲಿ ಕೊರಿಯ ವಿರುದ್ಧ 6-2ರಿಂದ ಸೋತಿತ್ತು.
Related Articles
ದಾಸ್ ಸಾಧನೆಯ ಜತೆ ಭಾರತೀಯ ಬಿಲ್ಗಾರರು ಮೂರು ಕಂಪೌಂಡ್ ವಿಭಾಗದಲ್ಲಿ ಫೈನಲಿಗೇರಿ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಬುಧವಾರ ನಡೆಯುವ ಈ ಹೋರಾಟದಲ್ಲಿ ಭಾರತ ಚಿನ್ನಕ್ಕಾಗಿ ಗರಿಷ್ಠ ಪ್ರಯತ್ನ ನಡೆಸಲಿದೆ. ಸೋತರೆ ಬೆಳ್ಳಿಯ ಪದಕ ಲಭಿಸಲಿದೆ.
Advertisement
ಅಗ್ರ ಶ್ರೇಯಾಂಕದ ಅಭಿಷೇಕ್ ವರ್ಮ, ರಜತ್ ಚೌಹಾಣ್ ಮತ್ತು ಮೋಹನ್ ಭಾರದ್ವಾಜ್ ಅವರನ್ನು ಒಳಗೊಂಡ ಭಾರತೀಯ ತಂಡ ಕಂಪೌಂಡ್ ತಂಡ ವಿಭಾಗದಲ್ಲಿ ಇರಾನ್ ತಂಡವನ್ನು 229-221 ಅಂಕಗಳಿಂದ ಸೋಲಿಸಿ ಫೈನಲಿಗೇರಿತು. ಫೈನಲಿನಲ್ಲಿ ದ್ವಿತೀಯ ಶ್ರೇಯಾಂಕದ ಕೊರಿಯ ತಂಡದ ಸವಾಲನ್ನು ಎದುರಿಸಲಿದೆ.
ವನಿತೆಯರ ಕಂಪೌಂಡ್ ತಂಡ ವಿಭಾಗದಲ್ಲಿ ಜ್ಯೋತಿ ಸುರೇಖಾ ವನ್ನಮ್, ಮುಸ್ಕಾನ್ ಕಿರರ್ ಮತ್ತು ಪ್ರಿಯಾ ಗುರ್ಜಾರ್ ಅವರು ಕೂಡ ಇರಾನ್ ಜೋಡಿಯನ್ನು 227-221 ಅಂಕಗಳಿಂದ ಮಣಿಸಿ ಫೈನಲಿಗೇರಿದರು. ಬುಧವಾರ ನಡೆಯುವ ಫೈನಲ್‌ನಲ್ಲಿ ಅಗ್ರಸ್ಥಾನಿ ಕೊರಿಯದ ಸವಾಲನ್ನು ಭಾರತ ಎದುರಿಸಬೇಕಾಗಿದೆ. ಕಂಪೌಂಡ್ ಮಿಕ್ಸೆಡ್ ವಿಭಾಗದಲ್ಲಿ ಅಭಿಷೇಕ್ ವರ್ಮ ಮತ್ತು ಜ್ಯೋತಿ ಈಗಾಗಲೇ ಫೈನಲಿಗೇರಿದ್ದಾರೆ. ಬುಧವಾರ ನಡೆಯುವ ಫೈನಲ್‌ನಲ್ಲಿ ಅವರು ಚೈನೀಸ್ ತೈಪೆಯ ಜೋಡಿಯನ್ನು ಎದುರಿಸಲಿದ್ದಾರೆ. ಹೀಗಾಗಿ ಭಾರತ ಗರಿಷ್ಠ ಮೂರು ಚಿನ್ನ ಗೆಲ್ಲಲು ಪ್ರಯತ್ನಿಸಬಹುದು. ಅಭಿಷೇಕ್ ಮತ್ತು ಜ್ಯೋತಿ ಅವರಿಗೆ ಅವಳಿ ಚಿನ್ನ ಗೆಲ್ಲುವ ಅವಕಾಶವಿದೆ.