ಕೊಲಂಬೊ: ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಶ್ಯ ಕಪ್ ಟಿ20 ಕ್ರಿಕೆಟ್ ಪಂದ್ಯಾವಳಿವನ್ನು ಕೋವಿಡ್ ತೀವ್ರತೆಯಿಂದ ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಮೂಲ ವೇಳಾಪಟ್ಟಿಯಂತೆ ಕಳೆದ ವರ್ಷ ಈ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿತ್ತು. ಆಗ ಕೂಡ ಕೋವಿಡ್ ಅಡ್ಡಿಯಾಗಿ ಪರಿಣಮಿಸಿತ್ತು. ಬಳಿಕ ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿತ್ತು.
ಇದನ್ನೂ ಓದಿ:ಮಹಿಳಾ ಕ್ರಿಕೆಟ್ ತಂಡ: ವಾರ್ಷಿಕ ವೇತನ ಗುತ್ತಿಗೆ ಪ್ರಕಟ, ಮಿಥಾಲಿರಾಜ್ ಗಿಲ್ಲ ‘ಎ’ ಗ್ರೇಡ್
“ಕಠಿನ ಪರಿಸ್ಥಿತಿ ಎದುರಿರುವಾಗ ಜೂನ್‌ನಲ್ಲಿ ಇಂಥದೊಂದು ದೊಡ್ಡ ಮಟ್ಟದ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗದು’ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆ್ಯಶ್ಲೆ ಡಿ ಸಿಲ್ವ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದೆ. ಶ್ರೀಲಂಕಾ ಬುಧವಾರದಿಂದ ಮುಂದಿನ 10 ದಿನಗಳ ಕಾಲ ತನ್ನ ದೇಶಕ್ಕೆ ಆಗಮಿಸುವ ಎಲ್ಲ ವಿಮಾನ ಸಂಚಾರಗಳಿಗೂ ನಿರ್ಬಂಧ ವಿಧಿಸಿದೆ. ಆದರೆ ಲಂಕಾ ತಂಡ ಈಗಾಗಲೇ 3 ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ತಲುಪಿದೆ.