ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಬಹ್ರೈನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಪಾಕಿಸ್ಥಾನ ಆತಿಥ್ಯದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಭವಿಷ್ಯ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಸೆಪ್ಟಂಬರ್‌ನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿದೆ. ಆದರೆ ಇದರಲ್ಲಿ ಭಾರತ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸುವುದು ಭಾರತದ ಇರಾದೆಯಾಗಿದೆ. ಶ್ರೀಲಂಕಾ ಮತ್ತೊಂದು ಆಯ್ಕೆ ಆಗಿರಲಿದೆ. ಪಂದ್ಯಾವಳಿಯ ಹಕ್ಕು ಮಾತ್ರ ಪಾಕಿಸ್ಥಾನದ ಬಳಿಯೇ ಉಳಿಯಲಿದೆ.
“ಜಯ್ ಶಾ ಎಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಬಹ್ರೈನ್‌ಗೆ ತೆರಳಿದ್ದಾರೆ. ಆದರೆ ಬಿಸಿಸಿಐ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ತಂಡ ಏಷ್ಯಾ ಕಪ್ ಆಡಲು ಪಾಕಿಸ್ಥಾನಕ್ಕೆ ತೆರಳುವುದಿಲ್ಲ. ಸರಕಾರದ ಸೂಚನೆಯನ್ನು ಮೀರಿ ನಾವು ಮುಂದಡಿ ಇಡುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲೇ ಜಯ್ ಶಾ ಈ ಕುರಿತು ಹೇಳಿಕೆ ನೀಡಿದ್ದರು.