ಧಾರ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿರುವ ವಿವಾದಾತ್ಮಕ ಭೋಜಶಾಲಾ/ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ತಂಡವು ಶುಕ್ರವಾರ ಪ್ರಾರಂಭಿಸಿದೆ.
ಹತ್ತಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಎಎಸ್‌ಐ ತಂಡ ಶುಕ್ರವಾರ ಬೆಳಗ್ಗೆ ಸಂಕೀರ್ಣವನ್ನು ತಲುಪಿದ್ದು, ಅವರೊಂದಿಗೆ ಹಿರಿಯ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೂ ಇದ್ದರು.
ಮಧ್ಯಪ್ರದೇಶದ ಹೈಕೋರ್ಟ್, ಮಾರ್ಚ್ 11 ರಂದು ಎಎಸ್‌ಐಗೆ ಆರು ವಾರಗಳಲ್ಲಿ ಭೋಜಶಾಲಾ ಸಂಕೀರ್ಣದ ‘ವೈಜ್ಞಾನಿಕ ಸಮೀಕ್ಷೆ’ಯನ್ನು ನಡೆಸುವಂತೆ ಸೂಚಿಸಿತ್ತು.
ಮಧ್ಯಕಾಲೀನ ಯುಗದ ಸ್ಮಾರಕವಾಗಿರುವ ಭೋಜಶಾಲಾ/ಕಮಲ್ ಮೌಲಾ ಸಂಕೀರ್ಣವನ್ನು ಹಿಂದೂಗಳು ಸರಸ್ವತಿ ದೇವಿಯ ದೇವಾಲಯವೆಂದು ನಂಬುತ್ತಿದ್ದಾರೆ. ಮುಸ್ಲಿಂ ಸಮುದಾಯ ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
2003 ಏಪ್ರಿಲ್ 7 ರಂದು ಹೊರಡಿಸಲಾದ ASI ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಸಲ್ಲಿಸಲು, ಮುಸ್ಲಿಮರಿಗೆ ಶುಕ್ರವಾರದಂದು ನಮಾಜ್ ಮಾಡಲು ನೀಡಲಾಗಿದೆ.