ತಿ.ನರಸೀಪುರ: ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸದ ಏಕೈಕ ಶಾಸಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಎಂದು ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‌ಕುಮಾರ್ ಕಿಡಿಕಾರಿದರು.
ತಾಲೂಕಿನ ಮಾಡ್ರಹಳ್ಳಿ, ಕನ್ನಹಳ್ಳಿ, ಸೀಹಳ್ಳಿ, ಕನ್ನಹಳ್ಳಿಮೋಳೆ, ಕುರುಬೂರು, ಕೊತ್ತೇಗಾಲ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿ, ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಆಡಳಿತಾವಧಿಯಲ್ಲಿ ಅಣೆಕಟ್ಟೆಯಲ್ಲಿ ನೀರು ಸಮೃದ್ಧವಾಗಿದ್ದರೂ ನಾಲೆಗಳ ಮುಖಾಂತರ ರೈತರ ಜಮೀನಿಗೆ ನೀರು ಹರಿಸದೇ ರೈತರನ್ನು ಸಂಕಷ್ಟಕ್ಕೆ ದೂಡಿದರು.
ಈ ಹಿಂದೆಯೆಲ್ಲಾ 60 ಸಾವಿರ ಕ್ಯೂಸೆಕ್ ನೀರು ಇದ್ದರೂ ಕೂಡ ರೈತರ ಬೆಳೆಗೆ ನೀರು ಹರಿಸಲಾಗಿತ್ತು. ಆದರೆ ಮಹದೇವಪ್ಪ ಅವಧಿಯಲ್ಲಿ ರೈತ ವಿರೋಧಿ ನೀತಿಯಿಂದ ಅಣೆಕಟ್ಟೆಯಲ್ಲಿ 60 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಇದ್ದರೂ ಬೆಳೆಗಳಿಗೆ ನೀರು ಹರಿಸದೇ ರೈತರನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆಂದು ಲೇವಡಿ ಮಾಡಿದರು.
ಸಚಿವರನ್ನು ಆಯ್ಕೆ ಮಾಡಿದ ಮತದಾರರು ಅವರನ್ನು ಕಾಣಬೇಕಾದರೇ ಮೊದಲಿಗೆ ಅವರ ಹಿಂಬಾಲಕರಿಂದ ಅನುಮತಿ ಪಡೆದಷ್ಟೇ ಅವರನ್ನು ಭೇಟಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಾಮಾನ್ಯ ರೈತರು ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಇದೇ ಸಂದರ್ಭದಲ್ಲಿ ಮಾಡ್ರಹಳ್ಳಿ, ಸೀಹಳ್ಳಿ, ಕನ್ನಹಳ್ಳಿ, ಕುರುಬೂರು, ಕೊತ್ತೇಗಾಲ ಗ್ರಾಮಗಳಲ್ಲಿ ಬಿಜೆಪಿ, ಕಾಂಗ್ರೆಸ್ ತೊರೆದು ಅನೇಕ ಮುಖಂಡರು ಅಶ್ವಿನ್ ಬೆಂಬಲಿಸಿ ಜೆಡಿಎಸ್ ಸೇರ್ಪಡೆಯಾದರು.
ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಹೊಸಪುರ ಕೆ.ಮಲ್ಲು, ಶಂಭುದೇವನಪುರ ರಮೇಶ್, ಮಾದೇಶ್, ಮಾವಿನಹಳ್ಳಿ ರಾಜೇಶ್, ಕನ್ನಹಳ್ಳಿ ಮೋಳೆ ಚಿಕ್ಕಸ್ವಾಮಿ, ಮೂಗೂರು ಶಿವಮೂರ್ತಿ, ಬಿಎಸ್‌ಪಿ ಮುಖಂಡರಾದ ಪ್ರಭುಸ್ವಾಮಿ ಕರೋಹಟ್ಟಿ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸದಸ್ಯ ಧರ್ಮಯ್ಯನಹುಂಡಿ ಪ್ರಭು, ಮಹದೇವು, ಶಿವಕುಮಾರ್, ಮರಿತಿಬ್ಬೇಗೌಡ ಇತರರು ಇದ್ದರು.