Advertisement

ವರ್ಷಕ್ಕೆರಡು ಸಿನಿಮಾ ಮಾಡುವ ಕನಸಿದೆ…

01:57 PM Jul 26, 2023 | Team Udayavani |

ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ ಅಲ್ಲಿ ಅವರ ಮಾತು ಕಮ್ಮಿ. ಆದರೆ, ಸಿನಿಮಾ ತಂಡವನ್ನು ಮುಕ್ತ ಮನಸ್ಸಿನಿಂದ ಹರಸುತ್ತಾರೆ. ಸದ್ಯ ಅವರದ್ದೇ ನಿರ್ಮಾಣದ “ಆಚಾರ್‌ ಅಂಡ್‌ ಕೋ’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಿ ಅವರು ವಿಶೇಷ ಸಂದರ್ಶನ ನೀಡಿದ್ದು, “ಆಚಾರ್‌ ಅಂಡ್‌ ಕೋ’ ಜೊತೆಗೆ ತಮ್ಮ ಮುಂದಿನ ಸಿನಿಮಾ ಕನಸುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅದು ಅವರದ್ದೇ ಮಾತುಗಳಲ್ಲಿ..

Advertisement

‘ಆಚಾರ್‌ ಆ್ಯಂಡ್‌ ಕೋ’ ಫ್ಯಾಮಿಲಿ ಸಿನಿಮಾ: ಇದೊಂದು ಕಂಟೆಂಟ್‌ ಒರಿಯೆಂಟೆಡ್‌ ಸಿನಿಮಾ. ನಾನು ಇದರ ಸ್ಕ್ರಿಪ್ಟ್ ಓದಿದ್ದೆ. ಸ್ಕ್ರಿಪ್ಟ್ ನನಗೆ ತುಂಬ ಇಷ್ಟವಾಯಿತು. 60ರ ದಶಕದ ಬೆಂಗಳೂರಿನ ಕಥೆಯನ್ನು ಈ ಸಿನಿಮಾ ಹೊಂದಿಎ. ಪಕ್ಕಾ ಫ್ಯಾಮಿಲಿ ಡ್ರಾಮಾ. 2021ರ ಜೂನ್‌ನಲ್ಲಿ ಕಥೆ ಓಕೆ ಮಾಡಿದ್ದೆವು. ಆಮೇಲೆ 2021ರ ಡಿಸೆಂಬರ್‌ನಲ್ಲಿ ಶೂಟಿಂಗ್‌ ಆರಂಭಿಸಬೇಕು ಎಂದುಕೊಂಡಿದ್ದೆವು. ಕೊನೆಗೆ 2022ರ ಏಪ್ರಿಲ್‌ನಲ್ಲಿ ಸಿನಿಮಾ ಆರಂಭವಾಯಿತು. ಈಗ ಸಿನಿಮಾ ರಿಲೀಸ್‌ ಆಗುತ್ತಿದೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ಹಿಂದಿನ ಕಾಲದ ತರಹ ಈ ಸಿನಿಮಾದಲ್ಲೂ ದೊಡ್ಡ ಕುಟುಂಬ ಇರುತ್ತದೆ.

ಮಹಿಳಾ ಪ್ರಧಾನ ಸಿನಿಮಾ ಅಂಥ ಹೇಳಲಾಗದು: “ಆಚಾರ್‌ ಆ್ಯಂಡ್‌ ಕೋ’ ಸಿನಿಮಾದ ಹಲವು ವಿಭಾಗಳಲ್ಲಿ ಮಹಿಳೆಯರು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ ನಿಜ. ಹಾಗಂತ ಇದನ್ನು ಮಹಿಳಾ ಪ್ರಧಾನ ಸಿನಿಮಾ ಎನ್ನು ವಂತಿಲ್ಲ. ಚಿತ್ರವನ್ನು ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಆನಂತರ ಸಂಗೀತ ನಿರ್ದೇಶಕಿಯಾಗಿ ಬಿಂದುಮಾಲಿನಿ ಇದ್ದಾರೆ. ಹೀಗೆ ಸಿನಿಮಾದ ಪ್ರಮುಖ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಮೊದಲು ಈ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್‌ ಮಾಡುವುದು ಅಂದುಕೊಂಡಿದ್ದೆವು. ಆದರೆ, ಅಂದುಕೊಂಡ ಬಜೆಟ್‌ಗಿಂತ ಜಾಸ್ತಿಯಾಗಿದೆ. ಈಗ ಥಿಯೇಟರ್‌ ನಲ್ಲಿ ರಿಲೀಸ್‌ ಮಾಡುತ್ತಿದ್ದೇವೆ. ಜನರ ಪ್ರತಿಕ್ರಿಯೆ ಬಗ್ಗೆ ನನಗೆ ಕುತೂಹಲವಿದೆ.

ಕಂಟೆಂಟ್‌ ಮತ್ತು ಮೇಕಿಂಗ್‌ ಎರಡೂ ಮುಖ್ಯ: ಸಿನಿಮಾದ ಮೇಕಿಂಗ್‌ ಜೊತೆಗೆ ಕಂಟೆಂಟ್‌ ಕೂಡಾ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ, ಕಂಟೆಂಟ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ಕಂಟೆಂಟ್‌ ಜೊತೆಗೆ ಒಳ್ಳೆಯ ಮೇಕಿಂಗ್‌ ಇದ್ದರೆ ಸಿನಿಮಾದ ತೂಕ ಹೆಚ್ಚುತ್ತದೆ. ನಮ್ಮ ಬ್ಯಾನರ್‌ನಲ್ಲಿ ಬೇರೆ ಬೇರೆ ಜಾನರ್‌ನ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಇದೆ. ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿಲ್ಲ. ಅಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಸಾಕಷ್ಟು ಕಥೆಗಳನ್ನು ಕೇಳುತ್ತೇನೆ. ಇಷ್ಟವಾದ ಕಥೆಗಳನ್ನು ಸಿನಿಮಾ ಮಾಡುತ್ತಿದ್ದೇವೆ.

ಕಥೆ ಇಷ್ಟವಾದರೆ ನಾವೇ ಸಂಪರ್ಕಿಸುತ್ತೇವೆ…: ಇವತ್ತು ತಂತ್ರಜ್ಞಾನ ಮುಂದುವರೆದಿದೆ. ಕಂಟೆಂಟ್‌ಗಳನ್ನು ಬೇರೆ ಬೇರೆ ರೂಪ ದಲ್ಲಿ ತಲುಪಿಸಬಹುದು. ಕೆಲವರು ಶಾರ್ಟ್‌ ಮೂವೀಸ್‌ ಮಾಡಿಕೊಂಡು ಬಂದು ತೋರಿಸುತ್ತಾರೆ. ಇನ್ನು ಕೆಲವರು ಮೇಲ್‌ ಮಾಡಿ ಕಂಟೆಂಟ್‌ ಬಗ್ಗೆ ಹೇಳುತ್ತಾರೆ. ಮೊದಲು ನನಗೆ ಇಷ್ಟವಾದರೆ ಆ ನಂತರ ನನ್ನ ತಂಡಕ್ಕೆ ಹೇಳುತ್ತೇನೆ. ಆ ತಂಡ ಅವರನ್ನು ಸಂಪರ್ಕಿಸುತ್ತದೆ. ನಮ್ಮ ಜೊತೆ ಮೂವರು ನಿರ್ದೇಶಕರಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇನೆ.

Advertisement

ಕಾದಂಬರಿ ಓದುತ್ತಿದ್ದೇನೆ..: ನನಗೆ ಕಾದಂಬರಿ ಓದುವುದರೆಂದರೆ ತುಂಬಾ ಇಷ್ಟ. ಕಾಲೇಜು ದಿನಗಳಿಂದಲೂ ನಾನು ತುಂಬಾ ಕಾದಂಬರಿ ಓದಿದ್ದೇನೆ. ಸದ್ಯ ಕನ್ನಡದ ಎರಡು ಕಾದಂಬರಿಗಳನ್ನು ಓದುತ್ತಿದ್ದೇನೆ. ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಮಾಡುವ ಕನಸಿದೆ.

ಅಂಗಾಂಗ ದಾನದ ರಾಯಭಾರಿಯಾಗಲು ಆಹ್ವಾನ ಬಂದಿಲ್ಲ.. : ಅಂಗಾಂಗ ದಾನ ಜಾಗೃತಿ ಮೂಡಿಸುವ ಕುರಿತಾಗಿ ರಾಯಭಾರಿಯಾಗಿ ಮಾಡಲು ಸರ್ಕಾರ ಮುಂದಾಗಿರುವ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿ ತಿಳಿದೆ. ನನಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ, ಇದೊಂದು ಒಳ್ಳೆಯ ಕಾರ್ಯ.

ಥ್ರಿಲ್ಲರ್‌ ಸಿನಿಮಾಗಳೆಂದ್ರೆ ಇಷ್ಟ: ನಾನು ಎಲ್ಲಾ ಜಾನರ್‌ನ ಸಿನಿಮಾಗಳನ್ನು ನೋಡುತ್ತೇನೆ. ಆದರೆ, ವೈಯಕ್ತಿಕವಾಗಿ ನನಗೆ ಥ್ರಿಲ್ಲರ್‌ ಸಿನಿಮಾ ಗಳೆಂದರೆ ಇಷ್ಟ.

ವರ್ಷಕ್ಕೆರಡು ಸಿನಿಮಾ ಮಾಡುವ ಯೋಜನೆ: ನಮ್ಮ ಪಿಆರ್‌ಕೆ ಬ್ಯಾನರ್‌ ನಲ್ಲಿ ವರ್ಷಕ್ಕೆರಡು ಸಿನಿಮಾಗಳನ್ನು ಮಾಡುವ ಕನಸಿದೆ. ಆ ನಿಟ್ಟಿನಲ್ಲೇ ಕಥೆಗಳನ್ನು ಕೂಡಾ ಕೇಳುತ್ತಿದ್ದೇವೆ. ಈಗಾಗಲೇ “ಆಚಾರ್‌ ಅಂಡ್‌ ಕೋ’ ರಿಲೀಸ್‌ ಹಂತಕ್ಕೆ ಬಂದಿದೆ. ಇದರ ಜೊತೆಗೆ “ಓ2′ ಎಂಬ ಸಿನಿಮಾವೊಂದು ರೆಡಿಯಾಗಿದೆ. ಆ ಚಿತ್ರ ಕೂಡಾ ಈ ವರ್ಷ ರಿಲೀಸ್‌ ಆಗಬಹುದು.

ಸದ್ಯಕ್ಕೆ ಮಕ್ಕಳಿಗೆ ಸಿನಿಮಾಸಕ್ತಿ ಇಲ್ಲ… : ಮಕ್ಕಳ ಜೊತೆ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಹಾಗಂತ ಅವರಿಗೆ ತುಂಬಾ ಆಸಕ್ತಿ ಇಲ್ಲ. ಮಕ್ಕಳು ಇನ್ನೂ ಓದುತ್ತಿದ್ದಾರೆ. ಸದ್ಯಕ್ಕಂತೂ ಸಿನಿಮಾದ ಕಡೆ ಆಸಕ್ತಿ ತೋರಿಸಿಲ್ಲ. ದೊಡ್ಡ ಮಗಳು (ಧೃತಿ) ಆರ್ಟ್‌ ವಿಷಯವನ್ನು ಓದುತ್ತಿದ್ದಾಳೆ. ಚಿಕ್ಕವಳು (ವಂದಿತಾ) ಈಗ ಸೆಕೆಂಡ್‌ ಪಿಯುಸಿ. ಅವರ ಅಣ್ಣಂದಿರ (ವಿನಯ್‌, ಯುವ) ಜೊತೆಗೆ ಚಿಕ್ಕವಳು ಸಿನಿಮಾ ಕುರಿತಾಗಿ ಮಾತನಾಡುತ್ತಿರುತ್ತಾಳೆ.

Advertisement

Udayavani is now on Telegram. Click here to join our channel and stay updated with the latest news.

Next