ಕಲಬುರಗಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿ ಇಲ್ಲ. ರಾಜ್ಯ ಸರ್ಕಾರಗಳು ತಮ್ಮ ಸುಂಕವನ್ನು ಕಡಿತ ಮಾಡಿದರೆ ದರ ಇಳಿಕೆಯಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಕೇಂದ್ರಕ್ಕಿಂತ ಹೆಚ್ಚಿನ ಸುಂಕವನ್ನು ರಾಜ್ಯ ಸರ್ಕಾರಗಳು ವಿಧಿಸುತ್ತವೆ. ಹೀಗಾಗಿ ಆಯಾ ರಾಜ್ಯಗಳು ತಮ್ಮ ಪಾಲಿನ ಸುಂಕ ಕಡಿತ ಮಾಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಅಡುಗೆ ಅನಿಲ ದರ ಒಂದೇ ತಿಂಗಳಲ್ಲಿ ಮೂರನೆ ಬಾರಿ ಏರಿಕೆ..!
ನಾಗರಿಕರ ಮೇಲೆ ಹೊರೆ ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಆಡಳಿತ ಇರುವ ರಾಜ್ಯಗಳು ಸುಂಕ ಕಡಿತ ಮಾಡುತ್ತಿವೆ. ನಮ್ಮ ರಾಜ್ಯ ಸರ್ಕಾರ ಕೂಡ ಇಂಧನ ಸುಂಕ ಕಡಿತ ಮಾಡುವಂತೆ ಪಕ್ಷದ ವತಿಯಿಂದಲೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿತ್ತು. ಈಗ ಕಚ್ಚಾ ತೈಲ ಬೆಲೆ ಕಡಿಮೆ ಇರಬಹುದು. ಆದರೆ, ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯೊಂದು ಧರ್ಮ ಸಂಕಟ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಇದೇ ವೇಳೆ ಅಶ್ವಥ್ ನಾರಾಯಣ ಉಲ್ಲೇಖಿಸಿದರು.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೂಚ್ಯಂಕ ಮತ್ತೆ 51 ಸಾವಿರದ ಗಡಿಗೆ, ನಿಫ್ಟಿ 15,000