Advertisement

ಜೂ.20ರಂದು ‘ಬೇಸ್’ ಕ್ಯಾಂಪಸ್ ಉದ್ಘಾಟನೆಗೆ ಮೋದಿ; ಪೂರ್ವಸಿದ್ಧತೆ ವೀಕ್ಷಿಸಿದ ಅಶ್ವತ್ಥನಾರಾಯಣ

09:53 AM Jun 14, 2022 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೇ ತಿಂಗಳ 20ರಂದು ಇಲ್ಲಿನ ನಾಗರಬಾವಿ ಸಮೀಪದ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ’ದ (ಬೇಸ್) ನೂತನ ಕ್ಯಾಂಪಸ್ಸನ್ನು ಉದ್ಘಾಟಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ಕ್ಯಾಂಪಸ್ಸಿಗೆ ಭೇಟಿ ನೀಡಿ, ಪೂರ್ವಸಿದ್ಧತೆ ಮತ್ತಿತರ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

Advertisement

ಜತೆಗೆ, ಟಾಟಾ ಸಮೂಹ ಸಂಸ್ಥೆಯ ಸಹಾಯದೊಂದಿಗೆ ನಾಲ್ಕೂವರೆ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐ ಸಂಸ್ಥೆಗಳನ್ನು ಕೂಡ ಪ್ರಧಾನಿಗಳು ಈ ಕ್ಯಾಂಪಸ್ಸಿನಿಂದಲೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿಐ ಸಂಸ್ಥೆಯ ಮಾದರಿ ಪ್ರತಿಕೃತಿ ಮತ್ತು ಅತ್ಯಾಧುನಿಕ ಪ್ರಯೋಗಾಲಯದ ಮಾದರಿಗಳನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಮತ್ತಿತರ ಅಧಿಕಾರಗಳೊಂದಿಗೆ ಸಭೆ ನಡೆಸಿದ ಅವರು, ಯಾವ್ಯಾವ ವಿಭಾಗದವರು, ಯಾವ್ಯಾವ ಕೆಲಸಗಳನ್ನು ಮಾಡಬೇಕು ಎಂದು ಸೂಚಿಸಿ, ಸೂಕ್ತ ಸೂಚನೆಗಳನ್ನು ನೋಡಿದರು.

ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಯೂ ಸಮರ್ಪಕವಾಗಿರಬೇಕು. ಇದರಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ಕೊಡಬಾರದು. 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೇಸ್ ಕ್ಯಾಂಪಸ್, ಎನ್ಇಪಿ ಅಳವಡಿಕೆ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿದೆ. ಮೋದಿಯವರ ಭೇಟಿಯ ಸಂದರ್ಭದಲ್ಲಿ ಇದನ್ನು ಕೂಡ ಬಿಂಬಿಸಲು ಯೋಜಿಸಬೇಕು ಎಂದು ಅವರು ಹೇಳಿದರು.

ಐಟಿಐಗಳ ಲೋಕಾರ್ಪಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳನ್ನು ವೀಕ್ಷಿಸಿದ ಸಚಿವರು, ಪ್ರಯೋಗಾಲಯಗಳಲ್ಲಿ ಇರುವ ಆಧುನಿಕ ಸಾಧನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Advertisement

ಸಚಿವರ ಜತೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ.ದೀಪಕ್, ಬೇಸ್ ವಿವಿ ಕುಲಪತಿ ಪ್ರೊ ಭಾನುಮೂರ್ತಿ, ಕುಲಸಚಿವೆ ಶೋಭಾ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next