Advertisement

ಮುಂಬರುವ ದಿನಗಳಲ್ಲಿ ಕರ್ನಾಟಕ ಎಲ್ಲಾ ಕ್ಷೇತ್ರದಲ್ಲೂ ಅಗ್ರಸ್ಥಾನ ಪಡೆಯಲಿದೆ :ಅಶ್ವತ್ಥನಾರಾಯಣ

07:19 PM Oct 18, 2021 | Team Udayavani |

ದುಬೈ: ಇಡೀ ಏಷ್ಯಾ ಖಂಡದ `ಸ್ಟಾರ್ಟ್ ಅಪ್ ರಾಜಧಾನಿ’ಯಾಗಿರುವ ಕರ್ನಾಟಕವು ಮುಂಬರುವ ದಿನಗಳಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಆರೋಗ್ಯ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಅಗ್ರಸ್ಥಾನವನ್ನು ಪಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಇಲ್ಲಿ ನಡೆಯುತ್ತಿರುವ `ವರ್ಲ್ಡ್ ದುಬೈ ಎಕ್ಸ್ ಪೊ-2020’ರಲ್ಲಿ ಭಾಗವಹಿಸಿರುವ ಅವರು ಸೋಮವಾರ `ಕರ್ನಾಟಕವು ಏಷ್ಯಾದ ಸ್ಟಾರ್ಟಪ್ ರಾಜಧಾನಿಯಾಗಿದ್ದು ಹೇಗೆ?’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಕರ್ನಾಟಕವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ನವೋದ್ಯಮಗಳಿಂದ ಗಮನ ಸೆಳೆದಿದ್ದು, ಈ ವರ್ಷದ ಮೊದಲ 6 ತಿಂಗಳಲ್ಲಿ 17.2 ಶತಕೋಟಿ ಡಾಲರುಗಳಷ್ಟು ಶೋಧನಾ ಬಂಡವಾಳ (ವೆಂಚರ್ ಕ್ಯಾಪಿಟಲ್) ಹೂಡಿಕೆಯಾಗಿದೆ. ರಾಜ್ಯ ಸರಕಾರದ ಉತ್ಸಾಹ ಮತ್ತು ಉದ್ಯಮಸ್ನೇಹಿ ನೀತಿಗಳಿಂದಾಗಿ `ಡಿಜಿಟಲ್ ಇಂಡಿಯಾ’ ಕನಸು ನನಸಾಗುತ್ತಿದೆ ಎಂದು ಅವರು ಹೇಳಿದರು.

ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿ ನಮ್ಮ ತಂತ್ರಜ್ಞಾನವು ಅಗಾಧವಾಗಿ ನೆರವಿಗೆ ಬಂತು. 2021ರಲ್ಲಿ ರಾಜ್ಯದ 8 ಸ್ಟಾರ್ಟಪ್ ಗಳು ತಲಾ 100 ಕೋಟಿ ಡಾಲರ್ ಮೌಲ್ಯದ ಕಂಪನಿಗಳಾಗಿ ಬೆಳೆದಿದ್ದು ಯೂನಿಕಾರ್ನ್ ಸ್ಥಾನಮಾನವನ್ನು ಗಳಿಸಿಕೊಂಡಿವೆ. ಇದರ ಜೊತೆಗೆ ಇವು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಸಚಿವರು ಶ್ಲಾಘಿಸಿದರು.

ರಾಜ್ಯ ಸರಕಾರವು ತನ್ನ `ಎಲಿವೇಟ್’ ನೀತಿಯ ಮೂಲಕ ಹೊಸ ಬಗೆಯ ನವೋದ್ಯಮಗಳಿಗೆ ಸಂಪೂರ್ಣ ಉತ್ತೇಜನ ನೀಡುತ್ತಿದೆ. ನಗರಾಭಿವೃದ್ಧಿ, ಆರೋಗ್ಯ ಸೇವೆ, ಆಹಾರ ಭದ್ರತೆ, ಸ್ವಚ್ಛ ಪರಿಸರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಬೆಳೆಸಲು `ಗ್ರ್ಯಾಂಡ್ ಚಾಲೆಂಜಸ್ ಕರ್ನಾಟಕ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ನೆರೆದಿದ್ದ ಹೂಡಿಕೆದಾರರಿಗೆ ತಿಳಿಸಿದರು.

Advertisement

ಇದನ್ನೂ ಓದಿ :ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು

ಅಲ್ಲದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಿಗಳ ಆಯ್ದ 75 ನವೋದ್ಯಮಗಳಿಗೆ ಮೂಲನಿಧಿಯಿಂದ ಹಿಡಿದು ಸಂಪೂರ್ಣ ಬೆಂಬಲ ಕೊಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಭವಿಷ್ಯದ ನಿರ್ಣಾಯಕ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಮುಂತಾದವುಗಳಿಗೆ ಪ್ರೋತ್ಸಾಹ ನೀಡಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಉತ್ಕೃಷ್ಟತಾ ಕೇಂದ್ರಗಳು, ಅಗತ್ಯ ಸೌಲಭ್ಯಗಳು ಮತ್ತು ಪರಿಪೋಷಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ, ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ನಿರ್ದೇಶಕಿ‌ ಮೀನಾ ನಾಗರಾಜ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next