Advertisement

ಕಾಂಗ್ರೆಸ್‌ನಿಂದ ದ್ವೇಷದ ರಾಜಕೀಯ: ಡಾ. ಅಶ್ವತ್ಥ್ ನಾರಾಯಣ

08:37 PM Feb 24, 2022 | Team Udayavani |

ಬೆಂಗಳೂರು: ವಿರೋಧ ಪಕ್ಷ ಕಾಂಗ್ರೆಸ್‌ ಸಮಾಜದಲ್ಲಿ ಸಮಸ್ಯೆ- ಗೊಂದಲ ಉಂಟು ಮಾಡುತ್ತಿದೆ. ಸಮಾಜದಲ್ಲಿ ದ್ವೇಷ ಬೆಳೆಸುತ್ತಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಆಕ್ಷೇಪಿಸಿದರು.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವು ವಿಧಾನಸಭಾ ಕಲಾಪ ನಡೆಯದಂತೆ ನೋಡಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಅವರು ಸುಳ್ಳು ಮಾಹಿತಿಯನ್ನು ಪದೇಪದೇ ಹೇಳಿ ಅದನ್ನು ಸತ್ಯ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಖಂಡಿಸಿದರು.

ಹಿಜಾಬ್‌ ಪ್ರಕರಣ ಪ್ರಾರಂಭವಾದಾಗ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳು ಹೇಳಿಕೆ ನೀಡಿದ್ದರು. ವಿಧಾನಮಂಡಲದ ಕಾರ್ಯಕಲಾಪ ನಡೆಯದಂತೆ ನೋಡಿಕೊಂಡು ಹಣ ವ್ಯರ್ಥ ಮಾಡಿದ್ದಾರೆ. ಸ್ಪಷ್ಟತೆ, ಸಂಸದೀಯ ಸಂಸ್ಕೃತಿ ಇಲ್ಲದೆ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ ವೀರೇಂದ್ರ ಪಾಟೀಲ್, ಕೆ.ಸಿ.ರೆಡ್ಡಿ ಮತ್ತಿತರ ಮುಖಂಡರು ಒಂದು ಸ್ಪಷ್ಟ ಸಂಸ್ಕೃತಿ ಆಚಾರವನ್ನು ಇಟ್ಟುಕೊಂಡಿದ್ದರು. ರಚನಾತ್ಮಕವಾಗಿ ಕೆಲಸ ಮಾಡಬೇಕಾದ ಕಾಂಗ್ರೆಸ್‌, ರಾಜಕೀಯ ನಿಲುವು ತೆಗೆದುಕೊಂಡಿದೆ. ಪಿಳ್ಳೆ ನೆವ ಮುಂದಿಟ್ಟು, ಹಿಜಾಬ್‌ ವಿಚಾರ ಚರ್ಚಿಸಲು ಸಿದ್ಧರಿಲ್ಲದೆ ಸದನವನ್ನು ಬಹಿಷ್ಕರಿಸಿದ್ದಾರೆ ಎಂದರು.

ಕಾನೂನು, ವ್ಯವಸ್ಥೆಗೆ ಗೌರವ ಕೊಡುತ್ತಿಲ್ಲ. ವಿಷಯಾಂತರ ಮಾಡಲು ಪ್ರಯತ್ನ ಮಾಡಲಾಗಿದೆ. ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆ ಮಾಡಲು ಡಿ.ಕೆ.ಶಿವಕುಮಾರ್‌ ಮುಂದಾಗಿದ್ದರು. ಮಾತಿನಲ್ಲಿ ವಿಚಾರ ಮಂಡಿಸದೆ ದೈಹಿಕವಾಗಿ ಶಕ್ತಿ ಪ್ರಹಾರ ಮಾಡುವ ಪ್ರವೃತ್ತಿ ತೋರಿದ್ದು ಖಂಡನೀಯ ಎಂದು ಆಕ್ಷೇಪಿಸಿದರು.

Advertisement

ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಜನರು ಈಗಾಗಲೇ ಪಾಠ ಕಲಿಸಿದ್ದಾರೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸ ಮುಂದುವರಿಸಲು ಅಡ್ಡಿ ಮತ್ತು ಅವರ ಉತ್ತಮ ಭವಿಷ್ಯಕ್ಕೆ ಕಲ್ಲು ಹಾಕುವ ದುರುದ್ದೇಶದ ಪ್ರಯತ್ನ ಇದಾಗಿದೆ. ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ನಮ್ಮ ಪಕ್ಷ ಮುಂದಾಗಿತ್ತು. ರಾಷ್ಟ್ರಧ್ವಜ, ಕರ್ತವ್ಯ ಪಾಲನೆ, ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್‌ ಪಾಠ ನಮಗೆ ಬೇಕಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ- ಶಿವಕುಮಾರ್‌ ನಡುವಿನ ಪೈಪೋಟಿಯಿಂದ ಸದನದ ಕಲಾಪ ಬಹಿಷ್ಕರಿಸಿದ್ದಾರೆ. ಸದನದ ಖರ್ಚುವೆಚ್ಚವನ್ನು ಕಾಂಗ್ರೆಸ್‌ನಿಂದ ಪಡೆಯುವ ಕುರಿತ ಸಭಾಧ್ಯಕ್ಷರ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು. ಸಚಿವ ಈಶ್ವರಪ್ಪ ಅವರು ತಪ್ಪು ಹೇಳಿಕೆ ನೀಡಿದ್ದರೆ ಕಾನೂನಿನಡಿ ಪ್ರಕರಣ ದಾಖಲಿಸಬೇಕಿತ್ತು. ಅವರು ರಾಷ್ಟ್ರಧ್ವಜದ ಕುರಿತು ತಪ್ಪು ಹೇಳಿಕೆ ಕೊಟ್ಟಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಪಿಎಫ್ಐ, ಕೆಎಎಫ್ಡಿ  ಮತ್ತಿತರ ಸಮಾಜದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷವು ರಕ್ಷಣೆ ನೀಡಿದೆ. ರಾಷ್ಟ್ರದ್ರೋಹಿ ಸಂಘಟನೆಗಳ ಜೊತೆ ಬಿಜೆಪಿ ಯಾವತ್ತೂ ಕೈಜೋಡಿಸುವುದಿಲ್ಲ. ಹಿಂದೆ ಹತ್ಯೆಗೊಳಗಾದ ಜನರ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು. ಅವರ ಕುಟುಂಬಸ್ಥರ ಜೊತೆ ಪಕ್ಷದ ಮುಖಂಡರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಮೇಕೆದಾಟು ವಿಚಾರವನ್ನು ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್‌ ಪಕ್ಷ ಬಳಸಿಕೊಳ್ಳುತ್ತಿದೆ. ಪ್ರಾದೇಶಿಕ ಪಕ್ಷದಂತಿರುವ ಕಾಂಗ್ರೆಸ್‌ ಪಕ್ಷದಿಂದ ಯಾವತ್ತೂ ಮೇಕೆದಾಟು ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ. ಅದನ್ನು ಬಿಜೆಪಿ ಅನುಷ್ಠಾನಕ್ಕೆ ತರಲು ಬದ್ಧವಿದೆ ಎಂದರು.

ರಾಮನಗರ ಜಿಲ್ಲೆಯಲ್ಲಿ ಕೇವಲ ಶೇ 2.5 ಪ್ರದೇಶ ಮಾತ್ರ ನೀರಾವರಿಗೆ ಒಳಗೊಟ್ಟ ಪ್ರದೇಶವಿದೆ. ಅಲ್ಲಿನ ಜನಪ್ರತಿನಿಧಿ ಡಿ.ಕೆ.ಶಿವಕುರ್ಮಾ ಅವರು ಜಿಲ್ಲೆಗೆ ನ್ಯಾಯ ಒದಗಿಸಿಲ್ಲ. ಮೇಕೆದಾಟು ಪಾದಯಾತ್ರೆ ಇನ್ನೊಂದು ನಾಟಕ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಎನ್‌. ರವಿಕುಮಾರ್‌, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next