Advertisement

ಬೃಹತ್‌ ಸಾಮ್ರಾಜ್ಯದ ಅಷ್ಟಾಂಗ ಪಂಚಾಂಗ

11:31 PM Nov 25, 2022 | Team Udayavani |

ಕೆಲಸದ ಹಿಂದೆ ಒಳ್ಳೆಯ ದೃಷ್ಟಿ, ಮುದ ನೀಡುವ ಮಾತು, ಯೋಗ್ಯ ನಡವಳಿಕೆ, ನಡೆ- ನುಡಿಗೆ ಏಕಸೂತ್ರತೆ, ಪ್ರಾಮಾಣಿಕ ಪ್ರಯತ್ನ, ಪರಿಶುದ್ಧ ಆಲೋಚನೆಯೇ ಮೊದಲಾದ ಅಷ್ಟಾಂಗ ಮಾರ್ಗಗಳನ್ನು ಗೌತಮ ಬುದ್ಧ ಬೋಧಿಸಿದ್ದ. ಇವುಗಳನ್ನು ಯಮ, ನಿಯಮ ಗಳಲ್ಲಿರಿಸಿ ಅಷ್ಟಾಂಗ ಯೋಗವನ್ನು ಪತಂಜಲಿ ಪ್ರಚುರಪಡಿ
ಸಿದ. ದಶೋಪ ನಿಷತ್ತುಗಳೂ ಇದೇ ಮೂಲ ಸ್ರೋತವನ್ನು ಪ್ರತಿಪಾದಿಸಿದವು.

Advertisement

ಇವೆಲ್ಲದರ ಸಾರಸರ್ವಸ್ವ ದಂತಿರುವ ಭಗವದ್ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡ ತೋನ್ಸೆ ಉಪೇಂದ್ರ ಪೈಯವರು (26.11.1895  -13.12.1956) 1920-21ರಲ್ಲಿ ಉಡುಪಿಯಲ್ಲಿ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿ ಈಗ ಶತಮಾನ ಕಳೆದಿದೆ. ಇದಾದ ಬಳಿಕ ಉಪೇಂದ್ರ ಪೈಯವರು ಸಹೋದರ ಡಾ|ಟಿಎಂಎ ಪೈಯವರ ಜತೆ ಮಣಿಪಾಲಕ್ಕೆ ಬಂದುದು, ಉಪೇಂದ್ರ ಪೈಯವರ ಪ್ರೋತ್ಸಾಹದಲ್ಲಿ ಡಾ| ಟಿಎಂಎ ಪೈಯವರು ಆಧುನಿಕ ಮಣಿಪಾಲ ವನ್ನು ನಿರ್ಮಿಸಲು ಮುಂದಾದದ್ದು, ಈಗ ಕಾಣುತ್ತಿರುವ 50ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳು ಕಲಿಯುತ್ತಿರುವ ಮಣಿಪಾಲದ ಬೃಹತ್‌ ಸಾಮ್ರಾಜ್ಯಕ್ಕೆ ಶತಮಾನದ ಹಿಂದೆ ಆರಂಭಿಸಿದ ರಾಷ್ಟ್ರೀಯ ಶಾಲೆಯ ಸದುದ್ದೇಶದ ಪಂಚಾಂಗ ಇರುವುದನ್ನು ಉಪೇಂದ್ರ ಪೈಯವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ.

ಉಡುಪಿ-ಮಂಗಳೂರು ಕಾಲ್ನಡಿಗೆ
1920ರ ಆಗಸ್ಟ್‌ 1ರಂದು ಮಹಾತ್ಮಾ ಗಾಂಧೀಜಿಯವರು ಬ್ರಿಟಿಷ್‌ ಸರಕಾರಕ್ಕೆ ಸಹಕಾರ ಕೊಡದೆ ಇರುವ ಅಸಹಕಾರ ಚಳವಳಿಗೆ ಕರೆ ಕೊಟ್ಟು ಆಗಸ್ಟ್‌ 19ರಂದು ಮಂಗಳೂರಿಗೆ ಪ್ರಥಮ ಬಾರಿಗೆ ಭೇಟಿ ಕೊಟ್ಟರು. ಆಗಲೇ ಗಾಂಧೀಜಿಯವರಿಂದ ಪ್ರಭಾವಕ್ಕೆ ಒಳಗಾದ ಉಪೇಂದ್ರ ಪೈಯವರು ತಮ್ಮ ಟಿ.ರಘುನಾಥ ಪೈಯವರ (ಟಿಆರ್‌ಎ ಪೈ) ಜತೆ ಉಡುಪಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೋಗುವ ಸಂಕಲ್ಪ ಮಾಡಿ ಅದರಂತೆ ಸಾಗಿದರು. ಹಿಂದಿರುಗಿದವರೇ ಅಸಹಕಾರ ಚಳವಳಿ ಕುರಿತು ಪ್ರಚಾರ ಮತ್ತು ಜಾಗೃತಿ ಆಂದೋಲನ ನಡೆಸಿದರು. ಅಸಹಕಾರ ಚಳವಳಿಯಲ್ಲಿ ಸರಕಾರದ ಶಾಲೆಗಳಲ್ಲಿ ಕಲಿಯು ತ್ತಿರುವವರು ಶಾಲೆ ಬಿಡುವುದೂ ಒಂದಾಗಿತ್ತು. ಉಡುಪಿಯ ಮುಕುಂದ ನಿವಾಸವು ಪೈ ಸಹೋದರರ ನಿವಾಸಸ್ಥಾನವಾಗಿತ್ತು. ಅಲ್ಲಿ ಸಭೆ ಸೇರಿ ಸರಕಾರದ ಶಾಲೆ ಬಿಟ್ಟ ಮಕ್ಕಳಿಗೆ ಪರ್ಯಾಯ ಕಲಿಕೆಗಾಗಿ ರಾಷ್ಟ್ರೀಯ ಶಾಲೆ ಆರಂಭಿಸಲು ನಿರ್ಣಯ ತಳೆದರು. ಇದಕ್ಕೆ ಸಂಪನ್ಮೂಲದ ಕೊರತೆಯಾಗದಂತೆ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡವರು ಉಪೇಂದ್ರ ಪೈಯವರು. ಸ್ವತಃ ಅವರೇ ದೇಶಭಕ್ತಿಯ ಪಾಠ ಮಾಡುತ್ತಿದ್ದರು.

ಸ್ವದೇಶೀವ್ರತ-ಖಾದಿ ಭಂಡಾರ
ಅಸಹಕಾರದ ಇನ್ನೊಂದು ಆಯಾಮ ಸ್ವದೇಶೀ ಆಂದೋಲನ. ಖಾದಿಯನ್ನು ಧರಿಸುತ್ತಿದ್ದ ಪೈಯವರು, ಸ್ವದೇಶೀವ್ರತಕ್ಕೆ ಸ್ಥಳೀಯತೆಯನ್ನು ಅನ್ವಯಿಸಿದರು. ಕೈಮಗ್ಗ ವೃತ್ತಿಯಲ್ಲಿದ್ದ ನೇಕಾರರ ಕಸುಬಿಗೆ ಸಹಕಾರಿ ತಣ್ತೀದ ಸಂಘವನ್ನು ಸ್ಥಾಪಿಸಿದರು. ಉಡುಪಿಯಲ್ಲಿ ಖಾದಿ ಭಂಡಾರವನ್ನು ಪ್ರಥಮವಾಗಿ ಆರಂಭಿಸಿದರು. ಖಾದಿ ಪ್ರಚಾರದಲ್ಲಿ ಇವರಿಗೆ ಕೈಜೋಡಿಸಿದ ಕಾಡಬೆಟ್ಟು ಶ್ರೀನಿವಾಸ ಪೈಯವರ ಖಾದಿ ಭಂಡಾರವನ್ನು 1934ರಲ್ಲಿ ಗಾಂಧೀಜಿಯವರು ಉಡುಪಿಗೆ ಬಂದಾಗ ಉದ್ಘಾಟಿಸಿದರು ಎನ್ನುವುದನ್ನು ಕಣ್ಣಾರೆ ಕಂಡ ಹಿರಿಯ ಪತ್ರಕರ್ತ ದಿ|ಎಂ.ವಿ.ಕಾಮತ್‌ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರಕ್ಕೆ ನೀಡಿದ ಸಂದರ್ಶನದಲ್ಲಿ ಉಲ್ಲೇಖೀಸಿದ್ದಾರೆ.

ಸ್ವದೇಶೀ ಆರ್ಥಿಕ ನೀತಿ
ಸ್ವದೇಶೀ ಚಿಂತನೆಯಡಿ ಆರಂಭಗೊಂಡ ಬೆಂಗಾಲ್‌ ಕೆಮಿಕಲ್ಸ್‌ ಉತ್ಪನ್ನಗಳಿಗೆ ಕರಾವಳಿಯಲ್ಲಿ ಪ್ರಚಾರ ಕೊಟ್ಟವರು ಉಪೇಂದ್ರ ಪೈಯವರು, ಸ್ವದೇಶೀ ಆರ್ಥಿಕ ವ್ಯವಸ್ಥೆ ನೀತಿಯಡಿ ಡಾ| ಟಿಎಂಎ ಪೈಯವರ ಜತೆ 1925ರಲ್ಲಿ ಕೆನರಾ ಇಂಡಸ್ಟ್ರಿಯಲ್‌ ಬ್ಯಾಂಕಿಂಗ್‌ ಸಿಂಡಿಕೇಟ್‌ (ಸಿಂಡಿಕೇಟ್‌ ಬ್ಯಾಂಕ್‌) ಆರಂಭಿಸಿದರು. ಉಡುಪಿ, ಮಣಿಪಾಲದ ಹಲವು ಹೊಸತುಗಳಿಗೆ ಬೀಜಾಕ್ಷರ ಬರೆದವರೂ ಇವರೆಂದರೆ ತಪ್ಪಲ್ಲ. 1941ರಲ್ಲಿ ರಾಮಕೃಷ್ಣ ಥಿಯೇಟರ್‌ (ಈಗಿನ ಅಲಂಕಾರ್‌ ಥಿಯೇಟರ್‌) ಆರಂಭಿಸಿದರು. ಇದೇ ವೇಳೆ ವಿದ್ಯುತ್‌ ಸರಬರಾಜು, ಟೆಲಿಫೋನ್‌ ಎಕ್ಸ್‌ಚೇಂಜ್‌ ಕೇಂದ್ರ ಸ್ಥಾಪನೆ, ಹೊಟೇಲ್‌ಗ‌ಳ ಸ್ಥಾಪನೆಗೆ ಪ್ರೋತ್ಸಾಹ ನೀಡಿದರು.

Advertisement

ಭಗವದ್ಗೀತೆ ಪ್ರಭಾವ
ಹಿಂದಿ- ಸಂಸ್ಕೃತ ಪ್ರಚಾರಕ್ಕಾಗಿ ಜೀವನ ಮುಡಿ ಪಾಗಿಟ್ಟ ದಿ| ಉದ್ಯಾವರ ಲಕ್ಷ್ಮೀನಾರಾಯಣ ಕಿಣಿ
ಯವರು (ಉ.ಲ.ಕಿಣಿ) ಭಗವದ್ಗೀತೆ ಉಪೇಂದ್ರಪೈಯವರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎನ್ನುವುದನ್ನು “ಉಪೇಂದ್ರ ಪೈ ಮತ್ತು ಭಗ ವದ್ಗೀತೆ’ ಕೃತಿಯಲ್ಲಿ ತಿಳಿಸಿದ್ದಾರೆ. ಮಣಿಪಾಲದ ಗೀತಾ ಮಂದಿರದ ತೋಟದಲ್ಲಿದ್ದ ಪಪ್ಪಾಯಿ ಗಿಡದಿಂದ ಹಣ್ಣುಗಳನ್ನು ಕದ್ದು ಹೋಗುತ್ತಿದ್ದ ಮಹಿಳೆ ಯೊಬ್ಬಳಿಗೆ “ಈ ಮರ ನಿನಗೆ ಕೊಟ್ಟಿದ್ದೇನೆ. ಇನ್ನು ಮುಂದೆ ಹಗಲಿನಲ್ಲಿ ಹಣ್ಣುಗಳನ್ನು ತೆಗೆದುಕೊಂಡು ಹೋಗು’ ಎಂದು ಪ್ರೀತಿಯಿಂದಲೇ ಹೇಳಿದ್ದರು ಎಂಬಂತಹ ಅನೇಕ ನಡೆ-ನುಡಿಯ ಏಕಸೂತ್ರತೆ ವಿಚಾರಗಳು ಈ ಕೃತಿಯಲ್ಲಿವೆ.

ಇಂತಹವರ ಕೊನೇ ಕ್ಷಣ ಹೇಗಿರಬಹುದು? ಉ.ಲ.ಕಿಣಿಯವರು ಗೀತಾ ಮಂದಿರದಲ್ಲಿ ಹಿಂದಿ ತರಗತಿ ನಡೆಸುತ್ತಿದ್ದರು. ಆ ದಿನ ಉಪೇಂದ್ರ ಪೈಯವರಿಗೆ ಹುಷಾರಿರಲಿಲ್ಲ. ಕಿಣಿಯವರು ಮಾತನಾಡಿಸಲು ಹೋದಾಗ “ತರಗತಿಗೆ ನಾನೂ ಸೇರಿಕೊಳ್ಳುತ್ತೇನೆ. ಏನೇ ಕೆಲಸ ಮಾಡು ಜನ ಮೆಚ್ಚುವಂತಹ ಕೆಲಸ ಮಾಡು’ ಎಂದು ಹೇಳಿದರು. ಕಿಣಿಯವರು ನಿರ್ಗಮಿಸಿದರು. ಇದಾದ 20 ನಿಮಿಷಗಳಲ್ಲಿ ಡಾ|ಮಾಧವ ಪೈಯವರನ್ನು ಕರೆಯಲು ಸೂಚಿಸಿದ್ದರು. ಡಾ| ಪೈಯವರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರು. “ಹಾಗೇನಿಲ್ಲವೋ! ಈಗ ಚೆನ್ನಾಗಿದ್ದೇನೆ. ಎದೆ ನೋವೂ ಇಲ್ಲ. ತುಂಬ ಗೆಲುವಾಗಿದ್ದೇನೆ’ ಎಂದು ಒಮ್ಮೆಲೆ ಎದ್ದು ನಿಂತ ಉಪೇಂದ್ರ ಪೈಯವರ ಕಾಲುಗಳು ಥರಥರ ಕಂಪಿಸತೊಡಗಿದವು. ಡಾ| ಪೈಯವರು ಅಣ್ಣನನ್ನು ಆಧರಿಸಲು ಹೋದಾಗ ಗಂಭೀರ ಧ್ವನಿ ಮೊಳಗಿತು: “ಯಾಕೆ ಗಾಬರಿಯಾಗುವೆ? ನನಗೇನೂ ಆಗಿಲ್ಲವೋ, ಆಗುವುದಿಲ್ಲವೋ!’ ಎನ್ನುತ್ತ ಬವಳಿ ಬಂದು ರಾಮಕೃಷ್ಣ ಪರಮಹಂಸರ ಭಾವಚಿತ್ರದ ಮುಂದೆ ದೊಪ್ಪನೆ ಬಿದ್ದುಬಿಟ್ಟರು. ಮಾತು ಸ್ತಬ್ಧವಾಗಿತ್ತು…

ಸಹೋದರತ್ರಯರ ಯೋಗತ್ರಯ
ಟಿ. ರಘುನಾಥ ಪೈಯವರು
(ಟಿಆರ್‌ಎ ಪೈ) ಉಪೇಂದ್ರ ಪೈಯವರ ಕಿರಿಯ ಸಹೋದರ. ಇವರು ಕೆನರಾ ಮ್ಯೂಚುವಲ್‌ ಅಶ್ಯುರೆನ್ಸ್‌ ಲಿ. ಮುಖ್ಯಸ್ಥರಾಗಿದ್ದರು. ಭಗವದ್ಗೀತೆ, ವಿಷ್ಣುಸಹಸ್ರ ನಾಮವನ್ನು ನಿತ್ಯ ಪಠಿಸುತ್ತಿದ್ದ ಅಂಶಗಳೂ ಸೇರಿದಂತೆ ಉಪೇಂದ್ರ ಪೈಯವರ ಕುರಿತು ಹಲವು ಅಪೂರ್ವ ಮಾಹಿತಿಗಳನ್ನೂ ಲೇಖನದ ಮೂಲಕ ದಾಖಲಿಸಿದವರು ಇವರು. ಉಪೇಂದ್ರ ಪೈಯವರಲ್ಲಿ ಭಗವದ್ಗೀತೆಯ ಜ್ಞಾನಯೋಗ, ಡಾ|ಟಿ.ಮಾಧವ ಪೈಯವರಲ್ಲಿ ಕರ್ಮಯೋಗ, ಟಿಆರ್‌ಎ ಪೈಯವರಲ್ಲಿ ಭಕ್ತಿಯೋಗದ ಮಾದರಿಗಳನ್ನು ನೋಡಬಹುದಿತ್ತು ಎಂದು ಕೆನರಾ ಮ್ಯೂಚುವಲ್‌
ಉದ್ಯೋಗಿಯಾಗಿದ್ದ ಉಡುಪಿ ಬಡಗಪೇಟೆ ನಿವಾಸಿ ಅನಂತಕೃಷ್ಣ ರಾವ್‌ ಬೆಟ್ಟು ಮಾಡಿದ್ದರು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next