ಬದಿಯಡ್ಕ: ತಮಗಿರುವ ಮಿತಿಗಳನ್ನು ಹಿಂದೇಟು ಹಾಕಿಸಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ 1200 ದಲ್ಲಿ 1133 ಅಂಕಗಳಿಸಿರುವ ಅಶ್ರಯ್ ಕುಮಾರ್ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಕುಳತ್ತೂರು ನಿವಾಸಿಯಾಗಿರುವ ಇವರು ಬೆಷಿಟ್‌ಡಿಸೀಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಂತ ಹಂತವಾಗಿ ದೇಹದ ಎಲ್ಲ ಅಂಗಾಗಳನ್ನು ಕ್ಷೀಣಿಸುವಂತೆ ಮಾಡುವ ಈ ರೋಗ ಈಗಾಗಲೇ ಇವರನ್ನು ಸಾಕಷ್ಟು ಬಳಲಿಸಿದೆ. ಮಾತನಾಡಲು, ಬಾಯಿ ತೆರೆಯಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇವರು ತೊಳಲುತ್ತಿದ್ದಾರೆ. ಅಶ್ರಯ್ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
ವಿಜ್ಞಾನ ಇವರ ಪ್ರಧಾನ ಕಲಿಕಾ ವಿಷಯವಾಗಿದೆ. ರೋಗಭಾದೆಯ ಪರಿಣಾಮ ಕೆಲವು ತಿಂಗಳು ಮಾತ್ರ ಶಾಲೆಗೆ ತೆರಳಲು ಇವರಿಗೆ ಸಾಧ್ಯವಾಗಿತ್ತು. ಮನೆಯಲ್ಲಿ ಕುಳಿತು ಇವರು ನಡೆಸಿದ ಅಹೋರಾತ್ರೆಯ ಕಲಿಕೆಯ ಹಿನ್ನಲೆಯಲ್ಲಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ನಾಡಿಗೆ ಅಭಿಮಾನ ತಂದಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲೂ ಇವರು ಎಲ್ಲ ವಿಷಯಗಳಲ್ಲೂ ಎ ಶ್ರೇಣಿ ಪಡೆದಿದ್ದರು. ವಿಜ್ಞಾನದಲ್ಲಿ ಈಗಾಗಲೇ ಇವರು ತಮ್ಮ ನೈಪುಣ್ಯವನ್ನು ಖಚಿತಪಡಿಸಿದ್ದಾರೆ. ದೇಶದ ಅತಿ ಶ್ರೇಷ್ಠ ವಿಜ್ಞಾನ ಮೇಳಗಳಲ್ಲಿ ಒಂದಾದ ಐರಿಶ್ ವಿಜ್ಞಾನ ಮೇಳದಲ್ಲಿ ಎರಡು ರಾಜ್ಯದ ಪ್ರತಿನಿಧಿಯಗಿ ಭಾಗವಹಿಸಿ ಸೈ ಎನಿಸಿದ್ದಾರೆ. 2018 ರಲ್ಲಿ ಐರಿಶ್ ವಿಜ್ಞಾನ ಮೇಳದಲ್ಲಿ ಆಯ್ಕೆಗೊಂಡಿದ್ದ ಮೂರು ಪ್ರಬಂಧಗಳಲ್ಲಿ ಒಂದು ಇವರದ್ದಾಗಿತ್ತು. ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಉದದರದಲ್ಲಿ ಮೈಕ್ರೋ ಆರ್ಗನೈಸಂನ ಕುರಿತು ಇವರು ಅಂದು ಪ್ರಬಂಧ ರಚಿಸಿ, ಮಂಡಿಸಿದ್ದರು. ಕೂಲಿ ಕಾರ್ಮಿಕ ರವೀಂದ್ರನ್ ಅವರ ಅಕಾಲಿಕ ಮರಣದ ನಂತರ ಕೊಳತ್ತೂರು ಗ್ರಾಮ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿರುವ ದೀಪಾ ಅವರ ಅಲ್ಪವೇತನವೇ ಈ ಮನೆಗೆ ಆಧಾರವಾಗಿದೆ. ನರ್ಸಿಂಗ್ ಕಲಿಕೆ ನಡೆಸುತ್ತಿರುವ ಅಣ್ಣ ಮತ್ತು ಹತ್ತನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ತಮ್ಮನೂ ಆಶ್ರಯ್‌ಗೆ ಇದ್ದಾರೆ. ಬೆಳಗ್ಗೆ 5 ರಿಂದ 7 ಗಂಟೆಗೆ ವರೆಗೆ, ರಾತ್ರಿ 7 ರಿಂದ 11 ಗಂಟೆವರೆಗೆ ಇವರು ಕಲಿಕೆ ನಡೆಸುತ್ತಾರೆ.
ತಮ್ಮ ಕಲಿಕೆ ಅತ್ಯಧಿಕ ಪ್ರೋತ್ಸಾಹ ನೀಡುತ್ತಿರುವ ತಮ್ಮ ತಾಯಿ, ಕೇಂದ್ರ ವಿವಿಯ ಸಹಾಯಕ ಪ್ರಾಚಾರ್ಯ ಟೋನಿ ಗ್ರೇಸ್ ಮತ್ತು ಶಾಲಾ ಪ್ರಾಂಶುಪಾಲ ನಾರಾಯಣನ್ ಅವರನ್ನು ಆಶ್ರಯ್ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಒಬ್ಬ ಉತ್ತಮ ಡಾಕ್ಟರ್ ಆಗಬೇಕು ಎಂಬುದು ಅಶ್ರಯ್ ಅವರ ಬದುಕಿನ ಕನಸಾಗಿದೆ.