ಬೆಂಗಳೂರು: ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ, ಮುದ್ರಣ ಮಾಧ್ಯಮಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಬ್ರೇಕಿಂಗ್ ನ್ಯೂಸ್ ನೀಡುವ ಆತುರದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರಸಾರ ಮಾಡುತ್ತಿವೆ. ಆದರೆ ಮುದ್ರಣ ಮಾಧ್ಯಮಗಳು ಪರಿಶೀಲಿಸಿ ಸುದ್ದಿ ನೀಡುತ್ತವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾ ಡೆಮಿ ಹಮ್ಮಿ ಕೊಂಡಿದ್ದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ 16 ಪತ್ರಕರ್ತರಿಗೆ ಟ್ಯಾಬ್‌ಗಳನ್ನು ವಿತರಿಸಿ ಮಾತನಾಡಿದ ಸಚಿವರು, ದಿನ ನಿತ್ಯ ಎರಡು ಪತ್ರಿಕೆಯನ್ನು ಓದುವ ಅಭ್ಯಾಸವನ್ನು ನಾನು ಬೆಳೆಸಿಕೊಂಡಿದ್ದೇನೆ. ಅದರಂತೆ ಪ್ರತಿ ಯೊಬ್ಬರು ಪತ್ರಿಕೆಯನ್ನು ಓದುವುದರಿಂದ ಪತ್ರಿಕಾ ರಂಗ ಬೆಳೆಯಲು ಸಹಾಯಕವಾಗಲಿದೆ ಎಂದರು.
ಸತ್ಯ-ಸಂಗತಿಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮ ಹಾಗೂ ಸರಕಾರ ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನ ನಮ್ಮ ಮೇಲೆ ನಂಬಿಕೆ ಇಟ್ಟಿಕೊಂಡಿರುತ್ತಾರೆ. ಇಲ್ಲಿ ಕಾನೂನಿಗಿಂತಲೂ ನಂಬಿಕೆ ತುಂಬಾ ಮುಖ್ಯ. ಆ ನಂಬಿಕೆಯನ್ನು ಉಳಿಸಿ ಕೊಳ್ಳುವ ಮೂಲಕ ಕೆಲಸ ಮಾಡಬೇಕು ಎಂದು ಹೇಳಿದರು.
ತಂತ್ರಜ್ಞಾನ ಮುಂದುವರಿದಂತೆ ಸ್ಪರ್ಧೆಯೂ ಹೆಚ್ಚಾಗಿದ್ದು, ಪತ್ರಿಕಾ ರಂಗದಲ್ಲಿ ಪತ್ರಕರ್ತರು ತಮ್ಮ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೂ ಸವಲತ್ತುಗಳ ಆವಶ್ಯಕತೆ ಇದೆ. ದೈನಂದಿನ ಕೆಲಸಗಳಲ್ಲಿ ಒತ್ತಡವೂ ಇದ್ದು, ವರದಿಯನ್ನು ಬೇಗ ಮುಟ್ಟಿಸುವುದು ಈಗಿನ ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
Related Articles
ಮಾಧ್ಯಮ ಆಕಾಡೆಮಿ ವತಿಯಿಂದ ಟ್ಯಾಪ್ ವಿತರಣೆ ಒಳ್ಳೆಯ ಕೆಲಸ. ಇದರ ಜತೆಗೆ ಅದರ ಬಹು ಉಪಯೋಗ ಕುರಿತು ಸಹ ತರಬೇತಿ ನೀಡಿದರೆ ಸೂಕ್ತ ಎಂದು ತಿಳಿಸಿದರು.
ನಮ್ಮ ಸರಕಾರ ಸಾಕಷ್ಟು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದೆ. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮನೆಬಾಗಿಲಿಗೆ ತಲುಪುವಂತೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಏಳು ದಿನಗಳಲ್ಲಿ ಭೂ ಪರಿವರ್ತನೆ ಮಾಡಲಾಗುತ್ತಿದ್ದು, ಕಾಫಿ ಬೆಳೆಗಾರರಿಗೆ 1 ಲಕ್ಷ ಎಕ್ರೆ ಹಾಗೂ ಬಡ ರೈತರಿಗೆ 1.50 ಲಕ್ಷ ಎಕ್ರೆ ಜಮೀನು ನೀಡಲಾಗಿದೆ. 75 ಲಂಬಾಣಿ ತಾಂಡ ವಾಸವಿರುವ ಜಮೀನನ್ನು ನೋಂದಣಿ ಮಾಡಿಕೊಡಲಾಗಿದೆ ಎಂದರು.
ಅಕಾಡೆಮಿ ಅಧ್ಯಕ್ಷರಾದ ಕೆ. ಸದಾಶಿವ ಶೆಣೈ ಮಾತನಾಡಿ, ಪತ್ರಕರ್ತರಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ಜಾರಿಗೆ ತರಲು ಹಾಗೂ ಪತ್ರಕರ್ತರಿಗೆ ಬಸ್ ಪಾಸ್ ಕೊಡಿಸಲು ಸಚಿವ ಅಶೋಕ್ ಹೆಚ್ಚು ಶ್ರಮ ವಹಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಪತ್ರಕರ್ತರ ಸಮಸ್ಯೆಗಳಿಗೆ ತ್ವರಿತ ವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಖ್ಯಾತ ನಟಿ ಪ್ರೇಮಾ, ಅಕಾಡೆಮಿ ಸದಸ್ಯರು ಹಾಗೂ ಕಾರ್ಯದರ್ಶಿ ಸಿ. ರೂಪಾ ಉಪಸ್ಥಿತರಿದ್ದರು.