ಲಕ್ನೋ/ಹೊಸದಿಲ್ಲಿ: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಕೊನೆಗೂ ಶನಿವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ದೆದುರು ಹಾಜರಾಗಿದ್ದಾರೆ. ಅ.3ರಂದು 8 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರ ಕುರಿತು ಸತತ 8 ಗಂಟೆಗಳ ಕಾಲ ಮಿಶ್ರಾರನ್ನು ತನಿಖೆ ನಡೆಸಿದ ಬಳಿಕ ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ತನಿಖೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಮನ್ಸ್ ಜಾರಿ ಮಾಡಿದ್ದರೂ ಮಿಶ್ರಾ ಅವರು ಶುಕ್ರವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ 2ನೇ ಸಮನ್ಸ್ ಜಾರಿ ಮಾಡಲಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ 11 ಗಂಟೆಗೆ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಮಿಶ್ರಾ ತನಿಖಾ ತಂಡದೆದುದು ಹಾಜರಾದರು. ಇದೇ ವೇಳೆ ಘಟನೆ ನಡೆದ ದಿನ ರೈತರನ್ನು ಹತ್ಯೆಗೈದ ಕಾರಿನಲ್ಲಿ ತಾವು ಇರಲಿಲ್ಲ ಎಂದು ಹೇಳಿರುವ ಮಿಶ್ರಾ, ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನೂ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ರೈತರ ಹತ್ಯೆಯು ವ್ಯವಸ್ಥಿತ ಸಂಚು ಎಂದು ಆರೋಪಿಸಿರುವ ರೈತ ಸಂಘಟನೆಗಳು, ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಪುತ್ರ ಆಶಿಷ್ ಮಿಶ್ರಾರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿವೆ. ಈ ನಡುವೆ, ಲಖೀಂಪುರ ಘಟನೆ ಖಂಡಿಸಿ ಅ.11ರಂದು ನಡೆಯುವ ಮಹಾ ರಾಷ್ಟ್ರ ಬಂದ್‌ಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಒಕ್ಕೊರಲಿನಿಂದ ಖಂಡಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಕಲ್ಲಿದ್ದಲು ಕೊರತೆ ನಿವಾರಿಸಲು ತಕ್ಷಣ ಕೇಂದ್ರ ಸ್ಪಂದನೆ : ಸುನಿಲ್‌ಕುಮಾರ್
18ರಂದು ರೈಲ್ ರೋಖೋ: ಲಖೀಂಪುರ ಘಟನೆ ಖಂಡಿಸಿ ಅ.18ರಂದು ರೈಲು ತಡೆ ಹಮ್ಮಿಕೊಳ್ಳುವುದಾಗಿ ದೇಶದ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಶನಿವಾರ ಘೋಷಿಸಿದೆ. ಜತೆಗೆ, ಅ.12ರಂದು ರೈತರು ಲಖೀಂಪುರಕ್ಕೆ ಪಾದಯಾತ್ರೆ ನಡೆಸಲಿದ್ದು, ಅದರಲ್ಲಿ ಎಲ್ಲ ರೈತರೂ ಪಾಲ್ಗೊಳ್ಳುವಂತೆ ಮೋರ್ಚಾ ಕೇಳಿಕೊಂಡಿದೆ. ಅ.12 ಅನ್ನು ದೇಶಾದ್ಯಂತ “ಶಹೀದ್ ಕಿಸಾನ್ ದಿವಸ್’ ಎಂದು ಆಚರಿಸಲಾಗುವುದು. ಅಂದು ದೇಶದ ನಾಗರಿಕ ಸಂಘಟನೆಗಳು ರಾತ್ರಿ 8 ಗಂಟೆಗೆ ತಮ್ಮ ತಮ್ಮ ನಗರಗಳಲ್ಲಿ ಮೊಂಬತ್ತಿ ಮೆರವಣಿಗೆ ನಡೆಸುವಂತೆಯೂ ಕಿಸಾನ್ ಮೋರ್ಚಾ ಕರೆ ನೀಡಿದೆ. ಜತೆಗೆ, ಅ.15ರಂದು ದಸರಾ ಪ್ರಯುಕ್ತ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ಅ.26ರಂದು ಲಕ್ನೋದಲ್ಲಿ ಬೃಹತ್ ಮಹಾಪಂಚಾಯತ್ ಆಯೋಜಿಸಲಾಗುತ್ತದೆ ಎಂದೂ ಹೇಳಿದೆ.
ಬಿಜೆಪಿ ಕಾರ್ಯಕರ್ತರ ಕೊಲೆ ತಪ್ಪಲ್ಲ: ಟಿಕಾಯತ್
ಲಖೀಂಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕೊಲೆ ತಪ್ಪಲ್ಲ. ಅದು ಪ್ರತಿಭಟನಕಾರ ರೈತರ ಮೇಲೆ ಕಾರು ಹರಿಸಿದ್ದಕ್ಕೆ ಪ್ರತಿಯಾಗಿ ಆಕ್ರೋಶಗೊಂಡು ನಡೆಸಿದ ಕೃತ್ಯ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿದ್ದವರು ಕೊಂದಿದ್ದಾರೆ. ಹಾಗಾಗಿ ಅವರನ್ನು ಕೊಂದವರು ತಪ್ಪಿತಸ್ಥರು ಎಂದು ನಾನು ಹೇಳುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಇದೇ ವೇಳೆ, ದಿಲ್ಲಿ ಗಡಿಯಲ್ಲಿ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಅನ್ನದಾತರ ಪೈಕಿ ಸುಮಾರು 750 ಮಂದಿ ಪ್ರತಿಭಟನ ಸ್ಥಳದಲ್ಲೇ ಅಸುನೀಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಒಂದು ಬಾರಿ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಬೇಕು ಎಂದೂ ಟಿಕಾಯತ್ ಆಗ್ರಹಿಸಿದ್ದಾರೆ.