ಮಂಗಳೂರು: ಎಲ್ಲ ವಯಸ್ಸಿನವರ ಕಣ್ಣಿನ ತಪಾಸಣೆ ಮಾಡಿ ದೃಷ್ಟಿದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಆವಶ್ಯಕತೆಯಿರುವವರಿಗೆ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಮಾಡುವ ಸರಕಾರದ ಮಹತ್ವಾಕಾಂಕ್ಷಿ “ಆಶಾಕಿರಣ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 18ರಂದು ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಆಗಿರುವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರ ಹಾಗೂ ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೀಗೆ 8 ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆ ಜಾರಿಯಾಗಲಿದೆ. ಮುಂದೆ ಹಂತ ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.
ಕಣ್ಣಿನ ಆರೋಗ್ಯ ಸೇವೆಗಳ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ “ಆಶಾ ಕಿರಣ’ ಯೋಜನೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಆರೋಗ್ಯ ಸಿಬಂದಿ, ಆಶಾ ಕಾರ್ಯಕರ್ತೆಯರು ಮನೆ- ಮನೆಗಳಿಗೆ ಭೇಟಿ ನೀಡಿ, ಎಲ್ಲ ವಯೋಮಾನದವರಿಗೆ ಪ್ರಾಥಮಿಕ ಹಂತದ ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಕಣ್ಣಿನ ತೊಂದರೆ ಇದ್ದವರನ್ನು ದ್ವಿತೀಯ ಹಂತದ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರ ವೈದ್ಯರು ಪರೀಕ್ಷಿಸಿ ಕನ್ನಡಕಗಳ ಅಗತ್ಯ ಇರುವವರಿಗೆ ಅವರ ದೃಷ್ಟಿ ದೋಷದ ಪ್ರಕಾರ ಕನ್ನಡಕಗಳನ್ನು ಯೋಜನೆಯಡಿ ಉಚಿತವಾಗಿ ವಿತರಿಸುತ್ತಾರೆ. ಪರೀಕ್ಷೆ ವೇಳೆ 9,43,398 ಜನರಲ್ಲಿ ಕಣ್ಣಿನ ತೊಂದರೆಗಳಿರುವುದು ಪತ್ತೆಯಾಗಿದೆ. ಇವರಿಗೆ ಕನ್ನಡಕ ವಿತರಣೆ, ಶಸ್ತ್ರಚಿಕಿತ್ಸೆ ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಜಿ.ಪಂ. ಸಿಇಒ ಆನಂದ್ ಉಪಸ್ಥಿತರಿದ್ದರು.