Advertisement

ಆಷಾಢ ಶುಕ್ರವಾರ: ಹರಿದು ಬಂದ ಭಕ್ತ ಸಾಗರ

11:47 AM Jul 01, 2017 | Team Udayavani |

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಾಡಿನ ವಿವಿಧ ಮೂಲೆ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಚಾಮುಂಡೇಶ್ವರಿಯ ದರ್ಶನ ಪಡೆದರು.

Advertisement

ದೇವಸ್ಥಾನದ ಪ್ರಧಾನ ಆರ್ಚಕ ಡಾ.ಎನ್‌.ಶಶಿಶೇಖರ್‌ ದೀಕ್ಷಿತ್‌ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಏಕಾವರ, ಸಹಸ್ರ ನಾಮಾರ್ಚನೆ ಹಾಗೂ ತ್ರಿಷಿತಿ ಅರ್ಚನೆಗಳನ್ನು ದೇವಿಗೆ ಸಲ್ಲಿಸಲಾಯಿತು.

ನಂತರ ಮುಂಜಾನೆ 5.30ಕ್ಕೆ ದೇವಾಲಯದ ಮುಖ್ಯದ್ವಾರ ತೆರೆದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ 9.30ಕ್ಕೆ ಹಾಗೂ ರಾತ್ರಿ 8.30ಕ್ಕೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರ ವರೆಗೆ ಅಭಿಷೇಕ ನಡೆಯಿತು. ರಾತ್ರಿ 10 ಗಂಟೆವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಬಿಟ್ಟು ಬಿಟ್ಟು ಹನಿ ಹಾಕುತ್ತಿದ್ದ ತುಂತುರು ಮಳೆ, ಮೋಡ ಕವಿದ ವಾತಾವರಣದ ಮಧ್ಯೆಯೂ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಮಹಾಲಕ್ಷ್ಮೀ ಅಲಂಕಾರ: ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರವು ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅದೇ ರೀತಿ ಮೊದಲ ಆಷಾಢ ಶುಕ್ರವಾರ ದೇವಿಗೆ ಮಹಾಲಕ್ಷ್ಮೀಯ ಅಲಂಕಾರ ಮಾಡಲಾಗಿತ್ತು. ನಾಡಿಗೆ ಸಮೃದ್ಧವಾದ ಮಳೆ ಆಗಲಿ ಎಂದು ದೇವಿಯನ್ನು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೆಂಪು, ಹಳದಿ, ನೀಲಿ, ಬಿಳಿಯ ಚೆಂಡು ಹೂವಿನಿಂದ ಹಾಗೂ ಸೇವಂತಿ ಹೂವಿನಿಂದ ದೇವಸ್ಥಾನದ ಒಳ ಆವರಣವನ್ನು ಅಲಂಕರಿಸಲಾಗಿತ್ತು. ಸಾರ್ವಜನಿಕರ ಉಚಿತ ದರ್ಶನಕ್ಕೆ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಕಲ್ಲಿಸಿದ್ದರೆ, 50 ರೂ. ಪಾವತಿಯ ವಿಶೇಷ ಸರತಿ ಸಾಲಿಗೆ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಕಲ್ಪಿಸಲಾಗಿತ್ತು. 

Advertisement

300 ರೂ. ಪಾವತಿಸಿ ಅಭಿಷೇಕ ಸೇವೆ ಮಾಡಿಸುವವರಿಗೆ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ನಂದಿನಿ ಹಾಲಿನ ಕೇಂದ್ರದ ಮುಂಭಾಗದಿಂದ ಪ್ರವೇಶ ಕಲ್ಪಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಟ್ಟಕ್ಕೆ ಆಗಮಿಸಿದ್ದರಿಂದ 50 ರೂ. ಮತ್ತು 300 ರೂ. ಪಾವತಿಸಿದವರೂ ಒಂದೇ ಸರತಿ ಸಾಲಿನಲ್ಲಿಯೇ ನಿಂತು ದೇವರ ದರ್ಶನ ಪಡೆಯಬೇಕಾಯಿತು. 

ಪ್ರಸಾದ: ದೇವರ ದರ್ಶನಕ್ಕೆಂದು ಆಗಮಿಸಿದ್ದ ಭಕ್ತರಿಗೆ ನಗರದ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 20 ಸಾವಿರ ಖರ್ಜೂರದ ಹೋಳಿಗೆ, 10 ಸಾವಿರ ಲಾಡ್ಡನ್ನು ಅನ್ನಸಂತರ್ಪಣೆಯಲ್ಲಿ ವಿತರಿಸಲಾಯಿತು.

ಉಚಿತ ಬಸ್‌: ಭಕ್ತಾದಿಗಳಿಗೆ ಸುಗಮ ಸಂಚಾರಕ್ಕಾಗಿ ಲಲಿತಮಹಲ್‌ ಹೆಲಿಪ್ಯಾಡ್‌ ನಿಂದ ಬೆಳಗಿನ ಜಾವ 2 ಗಂಟೆಯಿಂದಲೇ ದೇವಸ್ಥಾನಕ್ಕೆ ಉಚಿತ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಿಗಿ ಪೊಲೀಸ್‌ ಭದ್ರತೆ: ಚಾಮುಂಡಿ ಬೆಟ್ಟದ ದೇವಸ್ಥಾನದ ಸುತ್ತಲು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸುಗಮ ಸಂಚಾರ, ಜನದಟ್ಟಣೆ ನಿಯಂತ್ರಣ, ಪ್ರವೇಶದ್ವಾರಗಳಲ್ಲಿ ನಿಯಂತ್ರಣ, ಕಳ್ಳತನ, ಸರಗಳ್ಳತನ ತಡೆಯಲು ಮೈಕ್‌ ಮೂಲಕ ಎಚ್ಚರಿಕೆ ಸಂದೇಶಗಳನ್ನು ಪೊಲೀಸ್‌ ಅಧಿಕಾರಿಗಳು ನೀಡಿದರು.

ಅಷಾಢ ಮಾಸದಲ್ಲಿ ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾವ ಶುಭಕಾರ್ಯಗಳೂ ಈ ಮಾಸದಲ್ಲಿ ನಡೆಯಲ್ಲ ಕುಟುಂಬದವರೆಲ್ಲ ಒಟ್ಟುಗೂಡಿ ಈ ಮಾಸದಲ್ಲಿ ಮಾತ್ರ ಪೂಜೆಗಳಲ್ಲಿ ಭಾಗಿಯಾಗುತ್ತಾರೆ.
-ಡಾ.ಎನ್‌.ಶಶಿಶೇಖರ್‌ ದೀಕ್ಷಿತ್‌, ಚಾಮುಂಡೇಶ್ವರಿ ದೇವಸ್ಥಾನ ಪ್ರಧಾನ ಆರ್ಚಕರು.

Advertisement

Udayavani is now on Telegram. Click here to join our channel and stay updated with the latest news.

Next