Advertisement

12 ಸಾವಿರ ರೂ. ಗೌರವಧನ ನಿಗದಿಗೊಳಿಸಲು ಒತ್ತಾಯ

05:06 PM Jul 01, 2020 | Suhan S |

ಗದಗ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಗರ ಘಟಕ ಒತ್ತಾಯಿಸಿದೆ.

Advertisement

ಸಂಘದ ಪ್ರಮುಖರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕೋವಿಡ್ ಸೋಂಕು ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು, ಅವಿಶ್ರಾಂತವಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್‌ ಎಂದು ಸರ್ಕಾರ ಪರಿಗಣಿಸಿರುವುದು ಸ್ವಾಗತಾರ್ಹ. ಆದರೆ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಾಸ್ಕ್, ಫೇಸ್‌ ಶೀಲ್ಡ್‌, ಹ್ಯಾಂಡ್‌ಗ್ಲೌಸ್‌, ಸ್ಯಾನಿಟೈಸರ್‌ ಮತ್ತಿತರೆ ಯಾವುದೇ ಸೌಲಭ್ಯಗಳಿಲ್ಲ. ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದರಿಂದ ಆಶಾ ಕಾಯಕರ್ತೆಯರು ಸೋಂಕಿಗೆ ಬಲಿಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೂಡಲೇ ಅಗತ್ಯ ರಕ್ಷಣಾ ಸಾಮಗ್ರಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರೋತ್ಸಾಹ ಧನ ಮತ್ತು ಗೌರವಧನ ಎರಡು ರೀತಿಯ ಮಿಶ್ರಣದ ವಿಚಿತ್ರ ವೇತನ ಮಾದರಿಯಲ್ಲಿ ಅವರಿಗೆ ಹಣವನ್ನು ಪಾವತಿಸಲಾಗುತ್ತಿದೆ. ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ 4000 ರೂ. ಗೌರವಧನ ಹಾಗೂ ವಿವಿಧ ಚಟುವಟಿಕೆ ಆಧಾರಿತ 2000 ರಿಂದ 3000 ರೂ. ಸೇರಿ ಮಾಸಿಕ ಕನಿಷ್ಠ 8000ರಿಂದ 9000 ರೂ. ಹಣ ಕಾರ್ಯಚಟುವಟಿಕೆಗಳನ್ನು ನಿಗದಿ ಮಾಡಲಾಗಿದೆ. ಎಲ್ಲಾ ಚಟುವಟಿಕೆಗಳನ್ನು ಬಿಡಿ ಬಿಡಿಯಾಗಿ ಪೋರ್ಟಲ್‌ನಲ್ಲಿ ಎಂಟ್ರಿ ಮಾಡಬೇಕಾಗಿದೆ. ಈ ಹಣ ಸರಿಯಾಗಿ ಕಾರ್ಯಕರ್ತರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಒಂದೇ ನಿಶ್ವಿ‌ತ ಗೌರವಧನ ರೂ. 12 ಸಾವಿರ ಪ್ರತಿ ತಿಂಗಳು ಪಾವತಿಸಬೇಕು ಎಂದು ಮನವಿ ಮಾಡಿದರು.

ನಗರ ಅಧ್ಯಕ್ಷ ಲಕ್ಷ್ಮೀ ಪೂಜಾರ, ಅನ್ನಪೂರ್ಣ ಕಾಟವಾ, ಗೌರವ್ವ ಕಟ್ಟಿಮನಿ, ಗೀತಾ ಭಜಂತ್ರಿ, ಪ್ರೇಮಾ ಪಾಟೀಲ, ಬಸವಣ್ಣೆವ್ವ ಓಲೆಕಾರ ಹಾಗೂ ಆಶಾ ಕಾಯಕರ್ತೆಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next