Advertisement

ಪ್ರೋತ್ಸಾಹ ಧನಕ್ಕಾಗಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

08:59 PM Jun 01, 2019 | Team Udayavani |

ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಕಳೆದ ಹಲವು ತಿಂಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಹಾರ್ಡಿಂಜ್‌ ವೃತ್ತದಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, 6 ತಿಂಗಳ ಬಾಕಿ ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಲವು ಸೇವೆ: ಆರೋಗ್ಯ ಇಲಾಖೆಯಡಿ ಸುಮಾರು 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಹಳ್ಳಿ ಮತ್ತು ನಗರದ ತಳಮಟ್ಟದಲ್ಲಿ ಕೆಲಸ ನಿರ್ವಹಿಸುವ ಇವರು, ಗರ್ಭಿಣಿಯರ ಸುರಕ್ಷಿತ ಹೆರಿಗೆ, ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂ ಘೀ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದಾರೆಂದರು.

ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದರೂ ಸರ್ಕಾರ ಅವರನ್ನು ಕಡೆಗಣಿಸುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಸಿಗಬೇಕಾದ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಕಿಡಿ ಕಾರಿದರು.

ವಂಚನೆ: 6 ತಿಂಗಳ ಎಂಸಿಟಿಎಸ್‌ ಬಾಕಿ ವೇತನ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕೇವಲ 300 ರೂ. ನಂತೆ ನೀಡಲು ಅಭಿಯಾನದ ನಿರ್ದೇಶಕರು ಆದೇಶಿಸಿದ್ದಾರೆ. ಇದು ಎಲ್ಲಾ ಜಿಲ್ಲೆಗಳಲ್ಲೂ ಪಾವತಿಯಾಗಿಲ್ಲ. 2-3 ವರ್ಷದಿಂದ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟವಾಗಿದೆ. ಆರ್‌ಸಿಎಚ್‌ ಹೊಸ ಪೋರ್ಟಲ್‌ ಜಾರಿ ಮಾಡಲು 1-2 ತಿಂಗಳು ಸಮಯಾವಕಾಶ ಕೇಳಿದ್ದರು. ಆದರೆ 7 ತಿಂಗಳು ಕಳೆದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದರು.

Advertisement

ಬೇಡಿಕೆ ಈಡೇರಿಸಿ: ಆಶಾ ಕಾರ್ಯಕರ್ತೆಯರ ಮಾಸಿಕ ವೇತನವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು, ಆಶಾ ಸಾಫ್ಟ್ ಅಥವಾ ಆರ್‌ಸಿಎಚ್‌ ಪೋರ್ಟಲ್‌ಗೆ ಆಶಾ ವೇತನ ಜೋಡಣೆ ರದ್ದುಪಡಿಸಬೇಕು, ಪ್ರತಿ ದಿನದ ಸರ್ವೇಗೆ ಕನಿಷ್ಠ 300 ರೂ.ನಿಗದಿಪಡಿಸಬೇಕು, ಆಶಾ ಕಾರ್ಯಕರ್ತೆಯರಿಗೆ ಹೆರಿಗೆ ರಜೆ ನೀಡಿ, ಮಾಸಿಕ ಗೌರವಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಿ.ಎಸ್‌.ಸಂಧ್ಯಾ, ಸೀಮಾ, ಪುಟ್ಟರಾಜು, ಸರ್ವಮಂಗಳ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next