ವಾಡಿ: ಮಹಾಮಾರಿ ಕೊರೊನಾ ನಿಧಾನವಾಗಿ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದ್ದು, ಶಹಾಬಾದ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಕಪ್ಪು ಛಾಯೆ ಪಟ್ಟಣದ ಮೇಲೂ ಬಿದ್ದಿದೆ. ನಾಲ್ವರನ್ನು ಕೊರೊನಾ ಶಂಕಿತರೆಂದು ಗುರುತಿಸಿ ರವಿವಾರ ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಸಿಮೆಂಟ್ ನಗರಿ ತಲ್ಲಣಗೊಂಡಿದೆ.
ತೆಲಂಗಾಣ ರಾಜ್ಯ ತಾಂಡೂರ ಮೂಲದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಮಾ.20 ರಂದು ಪಟ್ಟಣದ ಎಸಿಸಿ ಕಾಲೋನಿಯ ಸಂಬಂಧಿಕರ ಮನೆಗೆ ಭೇಟಿ ನೀಡಿ, ಸುಮಾರು 10 ದಿನಗಳ ಕಾಲ ವಾಸವಿದ್ದ ಎನ್ನುವ ಮಾಹಿತಿ ಮೇರೆಗೆ ಸ್ಥಳೀಯ ಮೂವರನ್ನು ಕೊರೊನಾ ಶಂಕಿತರೆಂದು ಗುರುತಿಸಲಾಗಿದ್ದು, ಆರೋಗ್ಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಕಳುಹಿಸಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಯನ್ನು ತಾಂಡೂರು ವರೆಗೆ ತಲುಪಿಸಲು ಹೋಗಿದ್ದ ರಾವೂರ ಗ್ರಾಮದ ಕಾರು ಚಾಲಕನನ್ನು ಕೊರೊನಾ ಶಂಕಿತನೆಂದು ಪರಿಗಣಿಸಿ ಐಸೋಲೇಷನ್‌ಗೆ ದಾಖಲಿಸಲಾಗಿದೆ.
ಈ ಶಂಕಿತರನ್ನು ಕರೆದೊಯ್ಯಲು ಆ್ಯಂಬುಲೆನ್ಸ್, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಎಸಿಸಿ ಕಾಲೋನಿಗೆ ಆಗಮಿಸುತ್ತಿದ್ದಂತೆ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಎಸಿಸಿ ಕಾಲೋನಿ ಪ್ರವೇಶ ದ್ವಾರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಕ್ವಾರಂಟೈನ್ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರು: ಕಲಬುರಗಿಗೆ ಕೊರೊನಾ ಕಾಲಿಡುತ್ತಿದ್ದಂತೆ ಹೈಅಲರ್ಟ್ ಘೋಷಿಸಿದ ಜಿಲ್ಲಾಡಳಿತ ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವವರ ಮೇಲೆ ನಿಗರಾಣಿ ತೀವ್ರಗೊಳಿಸಿದೆ. ಸಿಮೆಂಟ್ ನಗರಿ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದುವರೆಗೂ ಒಟ್ಟು 2120 ಜನ ಹೋಂ ಕ್ವಾರಂಟೈನ್‌ನಲ್ಲಿ ಇದ್ದು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ನಿಗರಾಣಿಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.
ವಾಡಿ ನಗರ, ಲಾಡ್ಲಾಪುರ, ಕಮರವಾಡಿ, ರಾವೂರ, ನಾಲವಾರ, ಸನ್ನತಿ, ಯಾಗಾಪುರ ಸೇರಿದಂತೆ ವಿವಿಧ ತಾಂಡಾಗಳಿಗೆ ಬಂದಿರುವ ಪುಣೆ, ಮುಂಬೈ, ಬೆಂಗಳೂರು, ಆಂಧ್ರ, ದುಬೈ ನಗರಗಳ ವಲಸಿಗರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ.
ಅಸುರಕ್ಷತೆಯಲ್ಲಿ ಆಶಾ-ಆರೋಗ್ಯ ಸಿಬ್ಬಂದಿ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸೇವೆ ಅನನ್ಯವಾಗಿದೆ. ಜೀವದ ಹಂಗು ತೊರೆದು ಪ್ರತಿನಿತ್ಯ ಸಾವಿರಾರು ಜನ ಹೋಂ ಕ್ವಾರಂಟೈನ್‌ಗಳ ಮನೆಗಳಿಗೆ ಭೇಟಿ ನೀಡಿ ಆರೋಗ್ಯದ ವರದಿ ದಾಖಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಅಸುರಕ್ಷತೆ ಅನುಭವಿಸುತ್ತಿದ್ದಾರೆ. ಮಾಸ್ಕ್ ಮತ್ತು ಕೈಗವಚಗಳನ್ನು ವಿತರಿಸದೇ ಆರೋಗ್ಯ ಇಲಾಖೆ ಇವರನ್ನು ದುಡಿಸಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಎನ್-95 ಮಾಸ್ಕ್ ಧರಿಸಬೇಕು. ಆದರೆ ನಗರದ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಗುಣಮಟ್ಟದ್ದಲ್ಲದ ಮಾಸ್ಕ್ಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ.
ಮಡಿವಾಳಪ್ಪ ಹೇರೂರ