Advertisement
ರಾಜ್ಯಾದ್ಯಂತ ಒಟ್ಟು 62 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಳೆದ ಫೆಬ್ರವರಿಯಿಂದ ಗೌರವಧನ ಸಿಕ್ಕಿಲ್ಲ. ರಾಜ್ಯ ಸರಕಾರದಿಂದ ನೀಡುವ 5,000 ರೂ. ಗೌರವಧನ ಮತ್ತು ಕೇಂದ್ರ ಸರಕಾರದ ಅಂದಾಜು 5,000 ರೂ. ಪ್ರೋತ್ಸಾಹಧನ ಸಹಿತ 3 ತಿಂಗಳ ಒಟ್ಟು 30 ಸಾವಿರ ರೂ. ಇನ್ನೂ ಪಾವತಿಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ 3 ತಿಂಗಳ ಗೌರವಧನ ಬಾಕಿ ಇದ್ದರೆ, ಇನ್ನೂ ಕೆಲವೆಡೆ 4 ತಿಂಗಳುಗಳಿಂದ ಬಾಕಿ ಇದೆ. ಜತೆಗೆ ಚುನಾವಣೆ ವೇಳೆಯ ಪ್ರೋತ್ಸಾಹಧನವನ್ನೂ ಬಾಕಿ ಉಳಿಸಿಕೊಂಡಿದೆ.
Related Articles
Advertisement
ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ನೀಡಬೇಕಿದ್ದ ಗೌರವಧನ ಪಾವತಿಗೆ ತಾಂತ್ರಿಕ ಅಡಚಣೆಯಾಗಿದೆ. ಮೊದಲು ಸರಕಾರದಿಂದ ನೇರ ಪಾವತಿ ಮೂಲಕ ಗೌರವಧನ ನೀಡಲಾಗುತ್ತಿತ್ತು. ಈಗ ಕೇಂದ್ರ-ರಾಜ್ಯ ಸರಕಾರದಿಂದ ಒಟ್ಟಿಗೆ ವೇತನ ನೀಡುವುದಾಗಿ ಚಿಂತನೆ ನಡೆಯುತ್ತಿದೆ. ರಾಜ್ಯ ಸರಕಾರದಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು, ತಾಂತ್ರಿಕ ಅಡಚಣೆಯಿಂದ ಪಾವತಿ ತಡವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಫೆಬ್ರವರಿಯಿಂದ ಗೌರವಧನ ಸಿಗದೆ ಆಶಾ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ ತಿಂಗಳು ಸೇರಿದರೆ ಒಟ್ಟು 4 ತಿಂಗಳ ಗೌರವಧನ ಬಾಕಿ ಇದೆ. ಇದನ್ನೇ ನಂಬಿಕೊಂಡು ಬದುಕುವವರು ಸಾಕಷ್ಟು ಮಂದಿ ಇದ್ದಾರೆ. ಈಗ ಶಾಲೆ ಆರಂಭವಾಗಿದ್ದು, ಪಠ್ಯ, ಸಮವಸ್ತ್ರ, ಶಾಲಾ ಶುಲ್ಕ ಇತ್ಯಾದಿ ಕಾರಣದಿಂದ ಬಾಳು ದುಃಸ್ಥಿತಿಯತ್ತ ಸಾಗಿದೆ. ಶೀಘ್ರವಾಗಿ ಮಾಸಿಕ ಗೌರವಧನ ನೀಡಬೇಕು.– ಡಿ. ನಾಗಲಕ್ಷ್ಮಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ
ಆಶಾ ಕಾರ್ಯಕರ್ತೆಯರಿಗೆ ವಿವಿಧ ಯೋಜನೆಯಡಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ತಂತ್ರಾಂಶ ಅಡಚಣೆಯಿಂದಾಗಿ ಗೌರವಧನ ಪಾವತಿ ತಡವಾಗಿದೆ. ಮುಂದಿನ 5- 7 ದಿನಗಳಲ್ಲಿ ತಾಂತ್ರಿಕ ಅಡಚಣೆಯನ್ನು ಸರಿಪಡಿಸಿ ವೇತನ ನೀಡಲಾಗುವುದು.– ನವೀನ್ ಭಟ್, ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನೀಡುವ ಗೌರವ ಮತ್ತು ಪ್ರೋತ್ಸಾಹ ಧನವನ್ನು ಸಂಯೋಜಿಸಲಾಗುತ್ತಿರುವುದರಿಂದ ಪಾವತಿ ಕಾರ್ಯ ತಡವಾಗಿದೆ. ರಾಜ್ಯ ಸರಕಾರದಿಂದ ಹಣ ಬಿಡುಗಡೆಯಾಗಿದೆ. ಮುಂದಿನ 10 ದಿನಗಳಲ್ಲಿ ಪಾವತಿ ಮಾಡಲಾಗುತ್ತದೆ.– ಡಾ| ರೇಖಾ, ಆಶಾ ಯೋಜನೆಯ ಉಪನಿರ್ದೇಶಕಿ