ಮುದ್ದೇಬಿಹಾಳ: ಕೋವಿಡ್ ಲಸಿಕೆ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರು ಬೈಕ್ ಮೇಲಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ-ಗುಡಿಹಾಳ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಗುಡಿಹಾಳದ ನಿವಾಸಿ (55) ಬೋರಮ್ಮ ಶಿವಲಿಂಗಪ್ಪ ದೋರನಳ್ಳಿ ಎಂದು ಗುರುತಿಸಲಾಗಿದೆ.
ಬೈಕ್‍ನಿಂದ ಜಾರಿ ಬೀಳುತ್ತಿದ್ದಂತೆಯೇ ಗಾಬರಿಗೊಂಡ ಬೈಕ್ ಸವಾರ ಬೈಕ್ ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಡಿಹಾಳದಲ್ಲಿದ್ದ ಈಕೆಯನ್ನು ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಸಂಬಂಧ ಕರೆಸಲಾಗಿತ್ತು. ಬರುವಾಗ ಬಸ್ಸಿನಲ್ಲಿ ಬಂದಿದ್ದ ಈಕೆ ಮರಳುವಾಗ ವ್ಯಕ್ತಿಯೊಬ್ಬನ ಬೈಕ್‍ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಳು ಎಂದು ಮೂಲಗಳು ತಿಳಿಸಿವೆ.
ಮೃತರಿಗೆ ಪತಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ವಿಷಯ ತಿಳಿದು ಲಸಿಕಾ ಮೇಲುಸ್ತುವಾರಿ ಕರ್ತವ್ಯದ ಮೇಲಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.