Advertisement

ಕರಾವಳಿಯಾದ್ಯಂತ ದಿನವಿಡೀ ಉತ್ತಮ ಮಳೆ; ಮಳೆಗಾಲದ ನೆನಪು

11:13 PM May 11, 2022 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು: “ಅಸಾನಿ’ ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ. ಮುಂಜಾನೆಯೇ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿದ್ದು, ಕೆಲವು ದಿನಗಳಿಂದ ಇದ್ದ ಬಿಸಿಲಿನ ಧಗೆಗೆ ತಂಪೆರೆದಿದೆ.

Advertisement

ಮಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಮೋಡದ ವಾತಾವರಣ ಇತ್ತು. ಉಳಿದಂತೆ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ವಿಟ್ಲ, ಕನ್ಯಾನ, ಸುರತ್ಕಲ್‌, ಸುಳ್ಯ,ಐವರ್ನಾಡು, ಬೆಳ್ಳಾರೆ ಕಲ್ಮಡ್ಕ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಕೊಲ್ಲಮೊಗ್ರು, ಕಡಬ, ಹರಿಹರ ಪಳ್ಳತ್ತಡ್ಕ, ಮೂಡುಬಿದಿರೆ, ಸುರತ್ಕಲ್‌, ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲೂ ದಿನವಿಡೀ ಸಾಮಾನ್ಯ ಮಳೆಯಾಗಿದೆ. ಕೆಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಉಡುಪಿ, ಕಾಪು, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ ನಿರಂತರ ಮಳೆ ಸುರಿದಿದೆ. ಮುಂಜಾನೆಯೇ ಮಳೆ ಆರಂಭಗೊಂಡಿದ್ದ ಹಿನ್ನೆಲೆಯಲ್ಲಿ ಜನರು ಮನೆಯಿಂದಲೇ ಹೊರಡು ವಾಗಲೇ ಕೊಡೆ, ರೈನ್‌ಕೋಟ್‌ ವ್ಯವಸ್ಥೆ ಮಾಡಿಕೊಂಡಿದ್ದರು.

ಕುಂದಾಪುರದಲ್ಲಿ ಭಾರೀ ಮಳೆ
ಕುಂದಾಪುರ: ತಾಲೂಕಿನ ಎಲ್ಲೆಡೆ ಇಡೀ ದಿನ ಉತ್ತಮ ಮಳೆಯಾಗಿದೆ. ಗುಡುಗು, ಮಿಂಚು, ಗಾಳಿಯಬ್ಬರ ಇಲ್ಲದ್ದರಿಂದ ಹಾನಿ ಸಂಭವಿಸಿಲ್ಲ. ನಿರಂತರ ಮಳೆಯಿಂದಾಗಿ ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಿಗೆಲ್ಲ ಅಡಚಣೆ ಉಂಟಾಗಿತ್ತು. ಅನೇಕ ಕಡೆಗಳಲ್ಲಿ ಚರಂಡಿ ಸ್ವತ್ಛತೆ ಕಾರ್ಯ ಆಗದಿರುವ ಕಾರಣ ಮಳೆ ನೀರು ರಸ್ತೆಯಲ್ಲಿಯೇ ಹರಿದು ಸಾರ್ವ ಜನಿಕರಿಗೆ ತೊಂದರೆಯಾಗಿತ್ತು. ಹೆದ್ದಾರಿಯುದ್ದಕ್ಕೂ ಹಲವೆಡೆ ಮಳೆ ನೀರು ನಿಂತು, ವಾಹನಗಳು ಸಂಚರಿಸುವಾಗ ಡಿವೈಡರ್‌ ದಾಟಿ ಹಾರುತ್ತಿದ್ದ ದೃಶ್ಯ ಕಂಡು ಬಂತು.

ಸಮುದ್ರ ಪ್ರಕ್ಷುಬ್ಧ
ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮಲ್ಪೆ ಬೀಚ್‌ನಲ್ಲಿ ಜಲಕ್ರೀಡೆಗಳನ್ನು ರದ್ದುಗೊಳಿಸಲಾಗಿದೆ. ಸೈಂಟ್‌ ಮೇರಿಸ್‌ ದ್ವೀಪಕ್ಕೆ ಅವಧಿಗೂ ಮುನ್ನವೇ ನಿರ್ಬಂಧ ಹೇರಲಾಗಿದೆ. ಮಲ್ಪೆ ಬೀಚ್‌ನಲ್ಲಿ ಬುಧವಾರ ಜನರ ಸಂಖ್ಯೆ ಕಡಿಮೆಯಾಗಿತ್ತು. ಕೋಡಿ, ಗಂಗೊಳ್ಳಿ, ಮರವಂತೆ, ಸೋಮೇಶ್ವರ ಸಹಿತ ಎಲ್ಲೆಡೆಗಳಲ್ಲಿ ಕಡಲಬ್ಬರವೂ ಬಿರುಸಾಗಿತ್ತು.

Advertisement

ತಗ್ಗಿದ ಉಷ್ಣಾಂಶ
ಮಳೆಯ ಪರಿಣಾಮ ಗರಿಷ್ಠ ಉಷ್ಣಾಂಶ ತಗ್ಗಿದೆ. ಕೆಲವು ದಿನಗಳ ಹಿಂದೆ ಸರಾಸರಿ 36 ಡಿ.ಸೆ. ಇದ್ದ ಉಷ್ಣಾಂಶ ಸುಮಾರು 2 ಡಿ.ಸೆ. ಇಳಿಕೆಯಾಗಿದೆ. ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ 28.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 6 ಡಿ.ಸೆ. ಕಡಿಮೆ ಇತ್ತು. 26.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಇಂದು “ಎಲ್ಲೋ ಅಲರ್ಟ್‌’
ರಾಜ್ಯ ಕರಾವಳಿ ಬಾಗದಲ್ಲಿ ಮೇ 12ರಂದು ಬಿರುಸಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ “ಎಲ್ಲೋ ಅಲರ್ಟ್‌’ ಘೊಷಿಸಿದೆ.

ಈ ವೇಳೆ ಗಾಳಿಯಿಂದ ಕೂಡಿದ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ “ಅಸಾನಿ’ ಚಂಡಮಾರುತ ಕ್ಷೀಣಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಅದರ ಪರಿಣಾಮ ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next