Advertisement

ದೇವನಗರಿಯಲ್ಲೂಅಸಾನ್‌ ಅಬ್ಬರ

12:30 PM May 12, 2022 | Team Udayavani |

ದಾವಣಗೆರೆ: ಅಸಾನ್‌ ಚಂಡಮಾರುತದ ಪರಿಣಾಮ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬುಧವಾರ ಭಾರೀ ಮಳೆ ಸುರಿಯಿತು.

Advertisement

ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇತ್ತು. ಮಂಗಳವಾರ ರಾತ್ರಿ ಭರ್ಜರಿ ಮಳೆ ಸುರಿಯಿತು. ಬುಧವಾರ ಬೆಳಗ್ಗೆಯಿಂದಲೇ ತುಂತುರು ಮಳೆಯಾಗುತ್ತಿತ್ತು. ಜಯನಗರ, ನಿಟುವಳ್ಳಿ ಇತರೆ ಭಾಗದಲ್ಲಿ ಬಿರುಸಾಗಿ ಮಳೆ ಸುರಿದರೆ, ಇತರೆ ಭಾಗದಲ್ಲಿ ಆಗಾಗ ಮಳೆ ಬಂದಿತು.

ಮಧ್ಯಾಹ್ನ 2 ಗಂಟೆ ನಂತರ ಜೋರಾಗಿ ಮಳೆ ಸುರಿಯಲಾರಂಭಿಸಿತು. ಕೆಲವೇ ಹೊತ್ತಿನಲ್ಲಿ ರಸ್ತೆಗಳು ಸಂಪೂರ್ಣ ಮಳೆ ನೀರಿನಿಂದ ಮುಳುಗಿ ಹೋದವು. ವಿನೋಬನಗರ ಎರಡನೇ ಮುಖ್ಯ ರಸ್ತೆ, ಮೊದಲ ಮುಖ್ಯ ರಸ್ತೆ, ತೋಟಗಾರಿಕಾ ಇಲಾಖೆ, ಹಳೆ ಪಿ.ಬಿ. ರಸ್ತೆ, ಕೆ.ಬಿ. ಬಡಾವಣೆ, ನಿಟುವಳ್ಳಿ, ಹೊಂಡದ ವೃತ್ತ ಇತರೆ ಭಾಗದಲ್ಲಿ ಮಳೆ ನೀರು ನುಗ್ಗಿ ಬರುತ್ತಿದ್ದರಿಂದ ವಾಹನ ಸವಾರರು ಮುಂದೆ ಸಾಗಲು ಪರದಾಡಬೇಕಾಯಿತು.

ಮಹಾನಗರ ಪಾಲಿಕೆಯ ಮುಂದಿನ ರೈಲ್ವೆ ಕೆಳ ಸೇತುವೆಯಲ್ಲಿ ಭಾರೀ ಪ್ರಮಾಣದ ನೀರು ತುಂಬಿದ್ದರಿಂದ ಸಂಚಾರ ಸ್ಥಗಿತವಾಗಿತ್ತು. ರೇಣುಕ ಮಂದಿರದ ಪಕ್ಕ, ಶಿವಾಲಿ ಚಿತ್ರಮಂದಿರ, ಶೇಖರಪ್ಪ ನಗರ, ಡಿಸಿಎಂ ಟೌನ್‌ಶಿಪ್‌ ಬಳಿಯ ರೈಲ್ವೆ ಕೆಳ ಸೇತುವೆಯಲ್ಲೂ ಜನರು ಪ್ರಯಾಸಪಟ್ಟರು. ಸಾಕಷ್ಟು ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ದಾವಣಗೆರೆಯ ಕೆಲ ಭಾಗದಲ್ಲಿ ಜಲಸಿರಿ ಕಾಮಗಾರಿಗೆ ತೆಗೆದಿರುವ ಗುಂಡಿಗಳಲ್ಲಿ ಕಾರು, ಇತರೆ ವಾಹನ ಸಿಲುಕಿಕೊಂಡು ವಾಹನಗಳಲ್ಲಿದ್ದವರು ಹೊರ ಬರುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಯಿತು. ವಿನೋಬನಗರದ ಎರಡನೇ ಮುಖ್ಯ ರಸ್ತೆಯಲ್ಲಿ ಗುಂಡಿಯಲ್ಲಿ ಕಾರು ಸಿಕ್ಕಿಹಾಕಿಕೊಂಡಿದ್ದರಿಂದ ಕಾರಿನಲ್ಲಿದ್ದವರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರಿನಲ್ಲೇ ಉಳಿಯಬೇಕಾಯಿತು. ವಿಜಯನಗರ ಜಿಲ್ಲೆಯ ಕೊಟ್ಟೂರಿನ ಈಶ್ವರ ಗೌಡ ಎಂಬುವವರ ಕಾರು ಸಹ ಗುಂಡಿಯಲ್ಲಿ ಸಿಕ್ಕಿಕೊಂಡು ಕುಟುಂಬದವರು ತೀವ್ರ ಸಮಸ್ಯೆಗೀಡಾದರು. ಮಹಾನಗರ ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್‌ ಸ್ಥಳಕ್ಕೆ ಆಗಮಿಸಿ ಗುಂಡಿ ಮುಚ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ನಂತರ ಬಿಡುವು ನೀಡಿತು.

Advertisement

ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

ಎಸ್‌.ಎಂ. ಕೃಷ್ಣ ನಗರ, ಎಸ್‌.ಎಸ್. ಮಲ್ಲಿಕಾರ್ಜುನ ನಗರ, ಚೌಡೇಶ್ವರಿ ನಗರ, ಶಿವನಗರ, ಬೂದಾಳ್‌ ರಸ್ತೆ ಇತರೆ ಭಾಗದ ತಗ್ಗು ಪ್ರದೇಶದ ಜನರು ತೊಂದರೆ ಅನುಭವಿಸುವಂತಾಯಿತು. ಮಳೆ ನೀರು ಜೊತೆಗೆ ಚರಂಡಿ ನೀರು ಹರಿದು ಬಂದಿದ್ದರಿಂದ ಜನರು ಪರದಾಡುವಂತಾಯಿತು. ಅಲ್ಲಲ್ಲಿ ಮರದ ಕೊಂಬೆಗಳು ಸಹ ಬಿದ್ದ ಪರಿಣಾಮ ದಾರಿಹೋಕರು, ವಾಹನ ಸವಾರರಿಗೆ ತೊಂದರೆ ಎದುರಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next