Advertisement

Sudan; ಸೂಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ 31 ಕನ್ನಡಿಗರು

10:30 PM Apr 18, 2023 | Team Udayavani |

ಬೆಂಗಳೂರು: ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ನಡೆಯುತ್ತಿರುವ ವಾಗ್ವಾದಕ್ಕೆ ಜನ ಹೈರಾಣಾಗಿದ್ದು, ಕರ್ನಾಟಕದ 31 ಮಂದಿ ಇಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದಾವಣಗೆರೆ ಜಿಲ್ಲೆಯ 5, ಶಿವಮೊಗ್ಗದ 7, ಮೈಸೂರು ಜಿಲ್ಲೆಯ ಹುಣಸೂರಿನ 19 ಮಂದಿ ಸಿಲುಕಿಕೊಂಡಿದ್ದಾರೆ. ಈ ಕನ್ನಡಿಗರಲ್ಲಿ ಬಹುತೇಕರು ಹಕ್ಕಿ-ಪಿಕ್ಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೂಡಾನ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಜನರಿಗೆ ಆಹಾರ ಹಾಗೂ ನೀರಿನ ಕೊರತೆ ಎದುರಾಗಿದ್ದು, ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಕನ್ನಡಿಗರು ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆ ಪ್ರದೇಶಗಳಲ್ಲಿ ಎದುರಿಸುತ್ತಿರುವ ವಿಷಮ ಪರಿಸ್ಥಿತಿಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತೀಯರು ವಾಸಿಸುವ ಮನೆಗಳ ಮೇಲೆ ಗುಂಡಿನ ದಾಳಿ ಸಹ ನಡೆದಿದೆ ಎನ್ನಲಾಗಿದೆ.

ಆಹಾರ, ನೀರಿನ ಕೊರತೆಯಿಂದ ಬಳಲುತ್ತಿರುವುದಾಗಿ ಸಂತ್ರಸ್ತರು ತಾವು ಕಳುಹಿಸಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರು ವಾಸವಿರುವ ಕಟ್ಟಡದ ಮೇಲೂ ಗುಂಡಿನ ದಾಳಿ ನಡೆದಿದ್ದು, ಕೈಯಲ್ಲಿ ಜೀವ ಹಿಡಿದು ಬದುಕುವ ಸ್ಥಿತಿ ಎದುರಾಗಿದೆ. 31 ಕನ್ನಡಿಗರ ಕೈಕಿ ಬಹುತೇಕರು ಗಿಡಮೂಲಿಕೆ ಔಷಧಿ ಮಾರಾಟದ ವ್ಯವಹಾರಕ್ಕೆ ಹಾಗೂ ಸಣ್ಣಪುಟ್ಟ ಕೆಲಸ ಅರಸಿಕೊಂಡು ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ.

ಸುಡಾನ್‌ನಲ್ಲಿರುವ ಕರ್ನಾಟಕದ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.

ಅವರು ಸದ್ಯ ಇರುವ ಪ್ರದೇಶಗಳಲ್ಲೇ ಉಳಿದುಕೊಂಡು ಹೊರಗೆ ಹೋಗದಂತೆ ಸೂಚಿಸಲಾಗಿದೆ. ಪ್ರಸ್ತುತ ಹಿಂಸಾಚಾರದಲ್ಲಿ ಭಾರತೀಯರನ್ನು ಗುರಿಯಾಗಿಸಲಾಗಿಲ್ಲ. ಸುರಕ್ಷಿತ ಸ್ಥಳದಲ್ಲಿರಲು ಅವರಿಗೆ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಇನ್ನಷ್ಟು ಜನ ಸಿಲುಕಿರುವ ಸಾಧ್ಯತೆ:
ಭಾರತದ ವಿದೇಶಾಂಗ ಸಚಿವಾಲಯವು ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇನ್ನೂ ಅಧಿಕ ಜನ ಅಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ. ಸದ್ಯ 31 ಮಂದಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಸಹಾಯವಾಣಿ 1070 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಆಯುಕ್ತ ಡಾ.ಮನೋಜ್‌ ರಾಜನ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next