Advertisement

Chamarajanagar; ಮಹದೇವಪ್ಪ ಪುತ್ರ ಕಣಕ್ಕೋ, ಧ್ರುವನಾರಾಯಣ ಪುತ್ರನೋ?

11:11 PM Jan 15, 2024 | Team Udayavani |

ಚಾಮರಾಜನಗರ: ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಚಾಮರಾಜನಗರ ಹಿಂದಿನಿಂದಲೂ ಕಾಂಗ್ರೆಸ್‌ ಭದ್ರ ಕೋಟೆ. ಆದರೆ ಕಳೆದ ಬಾರಿ ಬಿಜೆಪಿ ಯಿಂದ ಶ್ರೀನಿವಾಸ ಪ್ರಸಾದ್‌ ಗೆಲ್ಲುವ ಮೂಲಕ ಆ ಕೋಟೆಯನ್ನು ಒಡೆದಿದ್ದರು. ಈ ಕ್ಷೇತ್ರ 1952 ಮತ್ತು 1957ರಲ್ಲಿ ಮೈಸೂರು ಲೋಕಸಭಾ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರವಾಯಿತು. 1962ರಿಂದೀಚೆಗಿನ ಇತಿಹಾಸ ನೋಡಿದರೆ ಕಾಂಗ್ರೆಸ್‌ 10 ಬಾರಿ, ಜನತಾದಳ 2 ಬಾರಿ, ಜೆಡಿಯು ಹಾಗೂ ಜೆಡಿಎಸ್‌ ತಲಾ 1 ಬಾರಿ ಗೆದ್ದಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಜಯ ದಾಖಲಿಸಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವುದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ಇದು ಪ್ರತಿಷ್ಠೆಯ ಕಣವಾಗಿದೆ. ಈ ಬಾರಿಯ ಇನ್ನೊಂದು ವಿಶೇಷ
ಎಂದರೆ, ಹಾಲಿ ಸಂಸದ ಶ್ರೀನಿವಾಸ್‌ ಪ್ರಸಾದ್‌ ರಾಜಕೀಯ ನಿವೃತ್ತಿ ಘೋಷಿಸಿರುವುದು. ಹಿಂದಿನ ಸಂಸದ ಆರ್‌. ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಇಬ್ಬರೂ ಸ್ಪರ್ಧೆಯಲ್ಲಿಲ್ಲ ಎಂಬುದು ವಿಶೇಷ.

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹನೂರು ಕ್ಷೇತ್ರ ಜೆಡಿಎಸ್‌ ವಶದಲ್ಲಿದೆ. 7ರಲ್ಲಿ ಕಾಂಗ್ರೆಸ್‌ ಶಾಸಕರೇ ಇರುವುದರಿಂದ ಗೆಲುವು ಸುಲಭ ಎಂದು ಕಾಂಗ್ರೆಸ್‌ ಆಕಾಂಕ್ಷಿಗಳು ಲೆಕ್ಕಾಚಾರ ಹಾಕಿದರೆ, ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಸ್ಥಾನವನ್ನು ಉಳಿಸಿ ಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಜೆಪಿ ಆಕಾಂಕ್ಷಿಗಳದು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಟಿಕೆಟ್‌ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ನಡೆದ ಸಭೆಯಲ್ಲಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌, ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಮಾಜಿ ಸಚಿವ ಬಿ. ಸೋಮಶೇಖರ್‌, ಮುಖಂಡರಾದ ಜಿ.ಸಿ. ಕಿರಣ್‌, ಡಿ.ಎನ್‌. ನಟರಾಜು, ಪ್ರೊ| ಮಹದೇವ್‌ ತಾವೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಎಂದು ಮನವಿ ಮಾಡಿದ್ದರು. ಇವರಲ್ಲದೇ ಚಾಮರಾಜನಗರ ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಅವರ ಪುತ್ರಿ ವೈದ್ಯೆ ಡಾ| ರೇಣುಕಾದೇವಿ ಕೂಡ ಆಕಾಂಕ್ಷಿಯಾಗಿದ್ದಾರೆ.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಮಹದೇವಪ್ಪ ಅವರನ್ನೇ ಪ್ರಬಲ ವಾಗಿ ಸೂಚಿಸುತ್ತಿದ್ದು, ಇದಕ್ಕೆ ಅವರು ಒಲವು ತೋರುತ್ತಿಲ್ಲ. ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

ದಿ| ಧ್ರುವನಾರಾಯಣ ಚಿರಪರಿಚಿತರಾಗಿದ್ದರಿಂದ ಅವರ ಪುತ್ರ, ನಂಜನ ಗೂಡು ಶಾಸಕ ದರ್ಶನ್‌ಧ್ರುವನಾರಾಯಣ ಅವರನ್ನು ಕಣಕ್ಕಿಳಿ ಸುವ ಆಲೋಚನೆಯೂ ಕಾಂಗ್ರೆಸ್‌ನಲ್ಲಿದೆ. ಆದರೆ ದರ್ಶನ್‌ ರಾಜ್ಯ ಮುಂದು ವರಿಯುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಲೋಕಸಭೆ ಟಿಕೆಟ್‌ ಮೇಲೆಯೇ ಕಣ್ಣಿಟ್ಟು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ ಟಿಕೆಟ್‌ಗಾಗಿ ತಮ್ಮ ಗಾಡ್‌ಫಾದರ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂಲಕ ಪ್ರಯತ್ನ ನಡೆಸಿದ್ದಾರೆ. ರಾಜ್ಯದಲ್ಲಿ ಒಂದು ಸ್ಥಾನವನ್ನು ಮಹಿಳೆಗೆ ಕೊಡಿ. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ನೀಡಿ ಎಂದು ಪುಷ್ಪಾ ಅಮರನಾಥ್‌ ಮನವಿ ಮಾಡುತ್ತಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಮಾಜಿ ಶಾಸಕ ಎಸ್‌.ಬಾಲರಾಜು ತೀವ್ರ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಕೊಳ್ಳೇಗಾಲದ ಟಿಕೆಟ್‌ ಸಿಗದ ಕಾರಣ ಎಂಪಿ ಟಿಕೆಟ್‌ ಉದ್ದೇಶದಿಂದಲೇ ಅವರು ಬಿಜೆಪಿಗೆ ಬಂದಿದ್ದಾರೆ ಎನ್ನಲಾ ಗುತ್ತಿದೆ. ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಂ, ನಿವೃತ್ತ ಐಎಫ್ಎಸ್‌ ಅಧಿಕಾರಿ ಡಾ| ರಾಜು ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಜಿ. ಪಂ. ಮಾಜಿ ಅಧ್ಯಕ್ಷ ಎಸ್‌. ಮಹದೇವಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ. ರಮೇಶ್‌ ಹಾಗೂ ಅವರ ಪುತ್ರ ನಟ ಅರ್ಜುನ್‌ ರಮೇಶ್‌ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು. ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಳಿಯಂದಿರಾದ ಹರ್ಷವರ್ಧನ್‌, ಡಾ| ಮೋಹನ್‌ ಹಾಗೂ ಬಿ. ರಾಚಯ್ಯ ಅವರ ಪುತ್ರ ಎ.ಆರ್‌.ಬಾಲರಾಜ್‌, ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು, ಜಿ.ಪಂ. ಮಾಜಿ ಸದಸ್ಯ ಕೋಟೆ ಲಕ್ಷ್ಮಣ್‌ ಅವರೂ ಪ್ರಯತ್ನಿಸುತ್ತಿದ್ದಾರೆ. ಕೊಳ್ಳೇಗಾಲದ ಮಾಜಿ ಶಾಸಕ ಎನ್‌. ಮಹೇಶ್‌ ಕೂಡ ಆಕಾಂಕ್ಷಿ ಎನ್ನಲಾಗಿದೆ. ಉಳಿದೆಲ್ಲ ಆಕಾಂಕ್ಷಿಗಳು ಎಸ್‌ಸಿ ಬಲಗೈ ಸಮಾಜದವರಾಗಿದ್ದು, ಎಡಗೈ ಪಂಗಡದ ತಮಗೊಂದು ಅವಕಾಶ ನೀಡಬೇಕೆಂದು ಕೋಟೆ ಎಂ. ಶಿವಣ್ಣ ಕೇಳುತ್ತಿದ್ದಾರೆ.

ಹಾಲಿ ಸಂಸದ
-ವಿ.ಶ್ರೀನಿವಾಸಪ್ರಸಾದ್‌ (ಬಿಜೆಪಿ)

ಕಾಂಗ್ರೆಸ್‌ ಸಂಭಾವ್ಯರು
-ಎಚ್‌.ಸಿ. ಮಹದೇವಪ್ಪ
-ಸುನೀಲ್‌ ಬೋಸ್‌
-ಜಿ.ಎನ್‌.ನಂಜುಂಡಸ್ವಾಮಿ
-ದರ್ಶನ್‌ ಧ್ರುವನಾರಾಯಣ
-ಪುಷ್ಪಾ ಅಮರನಾಥ್‌

ಬಿಜೆಪಿ ಸಂಭಾವ್ಯರು
-ಎಸ್‌.ಬಾಲರಾಜು
-ಕೋಟೆ ಎಂ. ಶಿವಣ್ಣ
-ಕೆ.ಶಿವರಾಂ
-ಡಾ| ಮೋಹನ್‌
-ಹರ್ಷವರ್ಧನ್‌

– ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next