ಬಳ್ಳಾರಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ಅಣಬೆಗಳಂತೆ ತೃತೀಯ ರಂಗ ಹುಟ್ಟಿಕೊಳ್ಳುತ್ತಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತೃತೀಯ ರಂಗಕ್ಕೆ ಹೆಚ್ಚು ದಿನ ಆಯುಷ್ಯವಿಲ್ಲ. ಈ ಹಿಂದೆಯೂ ಚುನಾವಣೆ ವೇಳೆ ಹುಟ್ಟಿಕೊಳ್ಳುತ್ತಿದ್ದ ತೃತೀಯ ರಂಗ, ಚುನಾವಣೆ ಬಳಿಕ ಮಾಯವಾಗಿ ಬಿಡುತ್ತಿತ್ತು. ಈಗಲೂ ಅದೇ ಪುನರಾವರ್ತನೆಯಾಗಲಿದೆ.
ಇಂದು ಕೈಜೋಡಿಸಿದವರೆಲ್ಲ ಒಬ್ಬೊಬ್ಬರಾಗಿ ಹಿಂದೆ ಸರಿಯುತ್ತಾರೆ. ಇದು ಒಂದು ರೀತಿ ತಕ್ಕಡಿಯಲ್ಲಿನ ಕಪ್ಪೆಗಳಂತೆ ಎಂದರು. ಕುಮಾರಸ್ವಾಮಿಯವರ ಪ್ರಮಾಣ ವಚನಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು, ತೃತೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷ ಪ್ರತ್ಯೇಕವಾಗಿದ್ದು, ಅದನ್ನು ಹೊರಗಿಡಲಾಗುವುದು. ಪ್ರಾದೇಶಿಕ ಪಕ್ಷಗಳು ಒಗ್ಗೂಡಲು ಇದೊಂದು ವೇದಿಕೆಯಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಕಾಂಗ್ರೆಸ್ ಪಕ್ಷದ ಪತನಕ್ಕೆ ಇದೇ ಮೊದಲ ಮೆಟ್ಟಿಲಾಗಲಿದೆ ಎಂದು ಲೇವಡಿ ಮಾಡಿದರು.
ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಈಗ ಜೆಡಿಎಸ್‌ಗೆ ಬಹುಮತ ಬಂದಿಲ್ಲ ಎಂದು ಮಾತು
ಬದಲಿಸುತ್ತಿದ್ದಾರೆ. ಒಂದು ವೇಳೆ ಸಾಲ ಮನ್ನಾ ಮಾಡದಿದ್ದರೆ,ಕುರ್ಚಿ ಖಾಲಿ ಮಾಡಿ ಎಂದು ಹೋರಾಟ ಮಾಡುತ್ತೇವೆ.
– ಬಿ.ಶ್ರೀರಾಮುಲು, ಬಿಜೆಪಿ ಶಾಸಕ