ದಾವಣಗೆರೆ: ರಾಜ್ಯ ವಿಧಾನ ಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ರಂಪಾಟ, ಕಣ್ಣೀರು, ಜಗಳ ಪ್ರಾರಂಭವಾಗುತ್ತದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಭವಿಷ್ಯ ನುಡಿದಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕಾಂಗ್ರೆಸ್‌ನಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಅವಸರ ಇಲ್ಲ ಎಂದರು.
ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ವೋಚ್ಚ ನಾಯಕರು. ಅವರನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಹ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ವಿಧಾನ ಸಭಾ ಚುನಾವಣೆ ನಡೆಸಲಾಗುವುದು ಎಂದು ಹೇಳುವ ಮೂಲಕ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಎಸ್ ವೈ ಮೌನವಾಗಿದ್ದಾರೆ ಅಂದರೆ ಅದು ಅವರ ದೌರ್ಬಲ್ಯ ಅಲ್ಲ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ದಾವಣಗೆರೆಯಲ್ಲಿ ಮಾ. 25ರಂದು ನಡೆಯುವ ಮಹಾ ಸಂಗಮ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಗೆ. ಇಚ್ಚೆ ಇದ್ದವರು ರಾಜ್ಯಾದ್ಯಂತ ಬರಬಹುದು. ಅಂದಿನ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುತ್ತಿದ್ದಾರೆ. ನಾವು ಸಿದ್ದರಾಮಯ್ಯನವರ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ದಾವಣಗೆರೆಯಲ್ಲಿ ಮಹಾ ಸಂಗಮ ಸಮಾವೇಶ ಮಾಡುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.