Advertisement

ಜನತೆ ಎಚ್ಚೆತ್ತುಕೊಂಡಾಗಲಷ್ಟೆ ಸಾಲದ ಆ್ಯಪ್‌ಗಳಿಗೆ ಕಡಿವಾಣ ಸಾಧ್ಯ

11:19 PM Jul 13, 2023 | Team Udayavani |

ದೇಶದೆಲ್ಲೆಡೆ ಸಾರ್ವತ್ರಿಕವಾಗಿ ವ್ಯಾಪಿಸಿರುವ ಸಾಲದ ಆ್ಯಪ್‌ಗ್ಳ ವಂಚನಾ ಜಾಲ ಅಮಾಯಕರನ್ನು ಪ್ರತಿದಿನ ಎಂಬಂತೆ ಬಲಿ ಪಡೆದು ಕೊಳ್ಳುತ್ತಿದೆ. ಬುಧವಾರವಷ್ಟೇ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಇಂತಹುದೇ ಲೋನ್‌ ಆ್ಯಪ್‌ವೊಂದರ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂತಹ ಅದೆಷ್ಟೋ ದುರಂತ ಸಾವುಗಳು ಈಗಾಗಲೇ ಸಂಭವಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇನ್ನು ಈ ವಂಚನಾ ಜಾಲದ ಸುಳಿಯಲ್ಲಿ ಸಿಲುಕಿ ಲಕ್ಷಾಂತರ ಕುಟುಂಬಗಳು ನೆಮ್ಮದಿ ರಹಿತ ಜೀವನವನ್ನು ಕಳೆಯುವಂತಾಗಿದೆ.

Advertisement

ಗಾಲ್ವಾನ್‌ ಘರ್ಷಣೆಯ ಬಳಿಕ ಕೇಂದ್ರ ಸರಕಾರ ಚೀನ ಮೂಲದ ಆ್ಯಪ್‌ಗ್ಳ ಮೇಲೆ ಹದ್ದುಗಣ್ಣಿರಿಸಿದ್ದು ಸಾಲ ನೀಡುವ ನೆಪದಲ್ಲಿ ಜನರನ್ನು ಸೆಳೆದು ಅವರನ್ನು ವಂಚಿಸುವ ಆ್ಯಪ್‌ಗ್ಳನ್ನು ಪತ್ತೆ ಹಚ್ಚಿ ಹಂತಹಂತವಾಗಿ ನಿಷೇಧಿಸುತ್ತಲೇ ಬಂದಿದೆ. ಸರಕಾರ ಈ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸುತ್ತ ಬಂದಿದ್ದರೂ ಈ ವಂಚನಾ ಜಾಲಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಈ ವಂಚನಾ ಆ್ಯಪ್‌ಗಳ ಸುಳಿಗೆ ಸಿಲುಕಿ, ತಮ್ಮ ಜೀವನಪೂರ್ತಿ ಈ ಆ್ಯಪ್‌ಗ್ಳ ಸೂತ್ರಧಾರರಿಂದ ನಾನಾ ತೆರನಾದ ಕಿರುಕುಳ, ಬೆದರಿಕೆಗಳನ್ನು ಎದುರಿಸುತ್ತ ಮರ್ಯಾದೆಗೆ ಅಂಜಿ ಸಾಲದ ಕಂತು ಪೂರ್ಣಗೊಂಡಿದ್ದರೂ ಅವರ ಬೆದರಿಕೆಗಳಿಗೆ ಮಣಿದು ಇನ್ನೂ ಸಾಲದ ಕಂತು ಪಾವತಿಸುತ್ತ ಬಂದಿರುವ ಕುಟುಂಬಗಳ ಸಂಖ್ಯೆ ಸಹಸ್ರಾರು. ಇನ್ನು ಈ ವಂಚಕ ಆ್ಯಪ್‌ಗ್ಳ ಸಿಬಂದಿಯ ಕಿರುಕುಳ, ಬೆದರಿಕೆ, ದೌರ್ಜನ್ಯ ತಾಳಲಾರದೆ ಅದೆಷ್ಟೋ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಾಲ ಪಡೆದವರು ತಮ್ಮ ಕುಟುಂಬದವರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳೂ ನಮ್ಮ ಮುಂದಿವೆ. ಇಷ್ಟೆಲ್ಲ ಅನಾಹುತ, ಅವಾಂತರಗಳು ನಡೆಯುತ್ತಿದ್ದರೂ ದೇಶದೆಲ್ಲೆಡೆ ಈ ವಂಚನಾ ಆ್ಯಪ್‌ಗ್ಳು ಎಗ್ಗಿಲ್ಲದೆ ಕಾರ್ಯಾಚರಿಸುತ್ತಿವೆ ಮತ್ತು ಈ ಆ್ಯಪ್‌ಗ್ಳೊಡ್ಡುವ ಆಮಿಷಕ್ಕೆ ಜನರು ಇನ್ನೂ ಮರುಳಾಗುತ್ತಿರುವುದು ವಿಪರ್ಯಾಸವೇ ಸರಿ.

ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಚೀನ ಮೂಲದ ಆ್ಯಪ್‌ಗಳು ಹೊಸ ರೂಪ ಮತ್ತು ಹೆಸರಿನೊಂದಿಗೆ ದೇಶವನ್ನು ಪ್ರವೇಶಿಸಿ ಕಾರ್ಯಾಚರಿ ಸುತ್ತಿದ್ದು ಇವುಗಳಿಗೆ ಲಗಾಮು ಹಾಕುವುದೇ ಸರಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು ಅದೇ ವೇಗದಲ್ಲಿ ವಂಚಕರು ಕೂಡ ತಮ್ಮ ಆ್ಯಪ್‌ಗ್ಳನ್ನು ಅಡ್ಡಹಾದಿಯಲ್ಲಿ ಸಕ್ರಿಯವಾಗಿಸಿಕೊಂಡು ಕಾರ್ಯಾಚರಿಸು ತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಜನರನ್ನು ಸೆಳೆಯಲು ಹೊಸ ಹೊಸ ವರಸೆಗಳನ್ನು ಬಳಸತೊಡಗಿದ್ದಾರೆ. ನಕಲಿ ಆ್ಯಪ್‌ಗ್ಳ ಈ ಕಾರ್ಯತಂತ್ರಕ್ಕೆ ಆಕರ್ಷಿತರಾಗಿ ಜನರು ಸಾಲಕ್ಕಾಗಿ ಈ ಆ್ಯಪ್‌ಗ್ಳ ಮೊರೆ ಹೋಗುತ್ತಿದ್ದಾರೆ.

ಈ ಆ್ಯಪ್‌ಗ್ಳಿಂದಾಗಿ ಸಹಸ್ರಾರು ಕುಟುಂಬಗಳು ಇನ್ನಿಲ್ಲದ ಬವಣೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡರೂ ಜನರು ಮಾತ್ರ ಈ ಆ್ಯಪ್‌ಗ್ಳು ಒಡ್ಡುವ ಆಮಿಷಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಜನರ ಈ ಅಸಡ್ಡೆಯ ಅಥವಾ ಭಂಡತನದ ಧೋರಣೆಯನ್ನು ತಮ್ಮ ಬಂಡವಾಳ ವಾಗಿಸಿಕೊಂಡಿರುವ ಈ ಆ್ಯಪ್‌ಗ್ಳು ಭಾರೀ ಸಂಖ್ಯೆಯಲ್ಲಿ ಜನರನ್ನು ತಮ್ಮ ಖೆಡ್ಡಾದೊಳಗೆ ಬೀಳಿಸುತ್ತಲೇ ಇವೆ.

Advertisement

ಸಾಲದ ಆ್ಯಪ್‌ ಆದಿಯಾಗಿ ವಂಚನಾ ಆ್ಯಪ್‌ಗ್ಳಿಗೆ ದೇಶದಲ್ಲಿ ಸಂಪೂರ್ಣವಾಗಿ ನಿರ್ಬಂಧ ಹೇರಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ತಂತ್ರಜ್ಞಾನ ಪರಿಣತರ ನೆರವು ಪಡೆದು ಈ ಆ್ಯಪ್‌ಗ್ಳು ದೇಶದಲ್ಲಿ ಕಾರ್ಯಾಚರಿಸದಂತೆ ಮಾಡಲು ಹೊಸ ವಿಧಾನವನ್ನು ಕಂಡುಕೊಳ್ಳಬೇಕು. ಸರಕಾರ ಯಾವುದೇ ಕಾನೂನು, ನಿರ್ಬಂಧಗಳನ್ನು ಜಾರಿಗೊಳಿಸಿದರೂ ಜನರು ಎಚ್ಚೆತ್ತುಕೊ ಳ್ಳದೇ ಹೋದಲ್ಲಿ ಈ ವಂಚನಾ ಆ್ಯಪ್‌ಗ್ಳಿಗೆ ಕಡಿವಾಣ ಹಾಕುವುದು ಕಷ್ಟಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next