“ವಿಶೇಷ ಸೂಚನೆ – ಸಾಧಿಸುವವರಿಗೆ ಸಾಥ್ ಕೊಡಿ, ಸಖತ್ ಆಗಿ ಸಿನಿಮಾ ಮಾಡೊಣ. ಬಜೆಟ್ ಇಲ್ದಿದ್ರೂ ಪರವಾಗಿಲ್ಲ…’
ಹೀಗಂತ, ಅಲ್ಲಿದ್ದ ಪೋಸ್ಟರ್ ಮೇಲೆ ಬರೆಯಲಾಗಿತ್ತು. ಬಹುತೇಕ ಹೊಸಬರ ತಂಡವೇ ಸೇರಿಕೊಂಡು “ಲೋ ಬಜೆಟ್’ನಲ್ಲೊಂದು ಸಿನಿಮಾ ಮಾಡೋಕೆ ಅಣಿಯಾಗಿತ್ತು. ಆ ಸಿನಿಮಾಗೆ “ಲೋ ಬಜೆಟ್’ ಅಂತಾನೇ ಹೆಸರಿಟ್ಟುಕೊಂಡಿರುವುದು ಇನ್ನೊಂದು ವಿಶೇಷ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. “ಲೋ ಬಜೆಟ್’ ಸಿನಿಮಾ ಆಗಿದ್ದರಿಂದ ಅಲ್ಲಿ ಎಲ್ಲವೂ ಸರಳವಾಗಿತ್ತು. ಜನಜಂಗುಳಿಯೂ ಇರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಸೇರಿಕೊಂಡು ಮಾಡಿದ ಮುಹೂರ್ತ ಸಮಾರಂಭಕ್ಕೆ ಅಂದು ತೂಗುದೀಪ ದಿನಕರ್ ಬಂದು ತಂಡಕ್ಕೆ ಶುಭಹಾರೈಸಿದರು. ಅದಕ್ಕೂ ಮುನ್ನ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು. ಈ ಚಿತ್ರದ ಮೂಲಕ ಮಂಜು ಹೆದ್ದೂರ್ ನಿರ್ದೇಶಕರಾಗುತ್ತಿದ್ದಾರೆ.
ಅಂದು ತಂಡ ಪರಿಚಯಿಸಿ, ಮಾತು ಶುರುಮಾಡಿದ ಮಂಜು ಹೆದ್ದೂರ್, “ನಾನು ಮೇಕಪ್‌ಮೆನ್ ಆಗಿ, ಅಸಿಸ್ಟೆಂಟ್ ಆಗಿ ಆರ್ಟಿಸ್ಟ್ ಆಗಿ ಈಗ ನಿರ್ದೇಶಕನಾಗಿದ್ದೇನೆ. ಒಂದು ಸಿನಿಮಾ ನಿರ್ದೇಶಿಸುವುದರ ಹಿಂದೆ ಎಷ್ಟೆಲ್ಲಾ ಸಮಸ್ಯೆಗಳಿರುತ್ತವೆ ಎಂಬುದನ್ನಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ಇದು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ತಯಾರಾಗುತ್ತಿದೆ. ನಿರ್ಮಾಪಕರ ಬಳಿ ಸಿನಿಮಾ ಮಾಡಲು ಅಲೆದಾಡುವ ನಿರ್ದೇಶಕನಿಗೆ “ಲೋ ಬಜೆಟ್’ನಲ್ಲೊಂದು ಸಿನಿಮಾ ಮಾಡೋಣ ಅಂತ ಅಲೆದಾಡಿಸುವ ನಿರ್ಮಾಪಕರ ಉದ್ದೇಶಗಳು ಹೇಗಿರುತ್ತವೆ ಎಂಬುದೇ ಸಿನಿಮಾದ ಅಂಶ. ಹಾಗಾಗಿ ಚಿತ್ರಕ್ಕೂ “ಲೋ ಬಜೆಟ್’ ಅಂತಾನೇ ಹೆಸರಿಡಲಾಗಿದೆ. ಸರ್ದಾರ್ ಸತ್ಯ, ಮನು ಹೆಗಡೆ, ಅಕ್ಷಯ್, ಪ್ರೇಮ್ ಪವಾರ್, ಮತ್ತು ಪ್ರೇಮ್‌ಕುಮಾರ್ ನಟಿಸುತ್ತಿದ್ದಾರೆ. ಲೇಖಾ ನಾಯಕಿಯಾಗಿದ್ದಾರೆ. ಸದ್ಯಕ್ಕೆ ಇನ್ನಷ್ಟು ನಾಯಕಿಯರ ಹುಡುಕಾಟ ನಡೆದಿದೆ’ ಅಂತ ವರದಿ ಒಪ್ಪಿಸಿದರು ಮಂಜು ಹೆದ್ದೂರ್.
“ಇದೊಂದು ಹೊಸ ಅನುಭವದ ಚಿತ್ರ ಆಗುತ್ತೆ ಎಂಬ ನಂಬಿಕೆ ನನ್ನದು’ ಎಂದರು ಸರ್ದಾರ್ ಸತ್ಯ. ಈವರೆಗೆ ಮಾಡದೇ ಇರುವಂತಹ ಪಾತ್ರ ಇಲ್ಲಿ ಸಿಕ್ಕಿದೆ. ನಿರ್ದೇಶಕರಿಗೆ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಗೊತ್ತಿರುವುದರಿಂದ ಇಲ್ಲಿ ಕಥೆಯನ್ನೇ ಹೀರೋ ಮಾಡಿಕೊಂಡು, ತಾಂತ್ರಿಕತೆಯನ್ನು ಹೊಸದಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಅಂದರು ಸತ್ಯ.
ಇನ್ನೊಬ್ಬ ನಾಯಕ ಅಕ್ಷಯ್‌ಗೆ ಇಲ್ಲಿ ಕಥೆ ಚೆನ್ನಾಗಿರುವುದರಿಂದ ಇದೊಂದು ಹೊಸದೊಂದು ಸುದ್ದಿ ಮಾಡುತ್ತೆ ಎಂಬ ನಂಬಿಕೆಯಂತೆ. ಮನು ಹೆಗಡೆಗೆ ಇದು ಮೂರನೇ ಸಿನಿಮಾವಂತೆ. ಅವರದು ಇಲ್ಲಿ ಲವ್ವರ್ ಬಾಯ್ ಪಾತ್ರವಂತೆ.
ಇನ್ನು, ಮುಂಬೈ ಬೆಡಗಿ ಲೇಖಾ ಅವರಿಗಿಲ್ಲಿ ಗುರುತಿಸಿಕೊಳ್ಳುವ ಪಾತ್ರ ಸಿಕ್ಕಿದೆಯಂತೆ. ಪಂಜಾಬ್ ಚಿತ್ರರಂಗದ ಶಕ್ಕುರಾಣ ಇಲ್ಲಿ ಖಳನಟರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಸಾಕಷ್ಟು ಪೋಷಕ ಕಲಾವಿದರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕ ಕುಮಾರ್ ಎನ್. ಬಂಗೇರ ಅವರಿಗೆ ಇದು ಕನ್ನಡದ ಮೊದಲ ನಿರ್ಮಾಣದ ಸಿನಿಮಾ. ಅವರು ಬಹಳ ವರ್ಷಗಳಿಂದಲೂ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿ ಚಿತ್ರರಂಗದಲ್ಲೂ ಕೆಲಸ ಮಾಡಿದ ಅನುಭವ ಇದೆ. ಹಾಗಾಗಿ, ಒಳ್ಳೇ ಸಿನಿಮಾವನ್ನು ಕನ್ನಡ ಮತ್ತು ಮರಾಠಿಯಲ್ಲಿ ಮಾಡುವ ಆಸೆ ಅವರದಂತೆ. ಕಾರ್ತಿಕ್ ಶರ್ಮ ಸಂಗೀತ ನೀಡುತ್ತಿದ್ದು, ಅಜಿತ್ ಸುವರ್ಣ ಕ್ಯಾಮೆರಾ ಹಿಡಿಯುತ್ತಿದ್ದಾರೆ.