ನವದೆಹಲಿ: 2024-25ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್ ಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ದೇಶದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್ ಯುಎಸ್ ಡಾಲರ್ ಗೆ ಮುಟ್ಟಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು.
ಇಬ್ಬರ ಗುರಿಯೂ ಮಹತ್ವಾಕಾಂಕ್ಷೆ ಹೊಂದಿರುವಂತಹದ್ದೇ. ಆದರೆ ಒಂದು ವೇಳೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಗುರಿ ತಲುಪಿದರೆ ಇದೊಂದು ಭಾರತದ ಆರ್ಥಿಕತೆಯ ಮೈಲಿಗಲ್ಲಾಗಲಿದೆ.
ಭವಿಷ್ಯದ ದೃಷ್ಟಿಯಲ್ಲಿ ಸಾಧಿಸಲಿರುವ ಈ ಆರ್ಥಿಕತೆ ಗುರಿಯ ಭರವಸೆಯ ನೈಜತೆ ಹೇಗಿದೆ ಎಂದರೆ ಭಾರತದ ರಾಜ್ಯಗಳು ನೀಡುವ ಪಾಲುಗಳಲ್ಲಿ ಕೆಲವೇ, ಕೆಲವು ರಾಜ್ಯಗಳು ಹೆಚ್ಚು ಆದಾಯ ತೆರಿಗೆ ನೀಡುತ್ತಿದೆ ಎಂದು ವರದಿ ತಿಳಿಸಿದೆ.
ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ರಾಜ್ಯಗಳು ಹಿಂದೆ ಬಿದ್ದಿದ್ದರೆ, ಕೆಲವು ರಾಜ್ಯಗಳು ಆದಾಯ ಸಂಗ್ರಹದಲ್ಲಿ ಮುಂದಿದೆ. ಸಿಬಿಡಿಟಿ(ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಬಿಡುಗಡೆ ಮಾಡಿರುವ ನೂತನ ಅಂಕಿ-ಅಂಶದ ಪ್ರಕಾರ ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕ ಸೇರಿ ಮೂರು ರಾಜ್ಯಗಳ ಕೊಡುಗೆಯೇ ದೇಶದ ಒಟ್ಟು ನೇರ ತೆರಿಗೆಯ ಆದಾಯದ ಶೇ.61ರಷ್ಟು ಪಾಲನ್ನು ಹೊಂದಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ತಮಿಳುನಾಡು ಹಾಗೂ ಗುಜರಾತ್ ಅನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿದರೆ ಟಾಪ್ 5 ರಾಜ್ಯಗಳ ಪಾಲು ಶೇ.72ಕ್ಕೆ ಏರಲಿದೆ. ನೇರ ತೆರಿಗೆ ಮುಖ್ಯವಾಗಿ ಆದಾಯ ತೆರಿಗೆ ಪಾವತಿ, ವೈಯಕ್ತಿಕ ಹಾಗೂ ಸಂಸ್ಥೆಗಳ ಕಾರ್ಪೋರೇಟ್ ತೆರಿಗೆಯನ್ನೊಳಗೊಂಡಿದೆ ಎಂದು ವರದಿ ತಿಳಿಸಿದೆ.