ಬೆಳಗಾವಿ: ಅಗ್ನಿಪಥ ಯೋಜನೆಯಡಿ ಭಾರತೀಯ ವಾಯು ಸೇನೆಯಲ್ಲಿ ಅಗ್ನಿವೀರವಾಯು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸಿ ಭವಿಷ್ಯದಲ್ಲಿ ಶಿಸ್ತಿನ ನಾಗರಿಕರನ್ನಾಗಿ ಪರಿವರ್ತಿಸಲಾಗುವುದು ಎಂದು ಭಾರತೀಯ ವಾಯು ಸೇನೆಯ ಕಮಾಂಡಿಂಗ್ ಇನ್ ಏರ್ ಚೀಫ್ ಮಾರ್ಷಲ್ ಮನವೇಂದ್ರ ಸಿಂಗ್ ಹೇಳಿದರು.
ಸಾಂಬ್ರಾ ಏರ್‌ವೆುನ್ ತರಬೇತಿ ಕೇಂದ್ರದಲ್ಲಿ ರವಿವಾರದಿಂದ ಆರಂಭವಾದ ಮೊದಲ ಬ್ಯಾಚ್‌ನ ಅಗ್ನಿವೀರವಾಯು ಅಭ್ಯರ್ಥಿಗಳ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, 22 ವಾರಗಳ ಕಾಲ ಕಠಿಣ ತರಬೇತಿಯಲ್ಲಿ ಅಗ್ನಿವೀರವಾಯುಗಳು ಸದೃಢ ವ್ಯಕ್ತಿಗಳಾಗುತ್ತಾರೆ.
ನಂತರ ನಾಲ್ಕು ವರ್ಷಗಳ ಕಾಲ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ತಾಂತ್ರಿಕ ಪರಿಣತಿ ಹಾಗೂ ಯುದ್ಧಕ್ಕೆ ಸನ್ನದ್ಧವಾಗುವ ಯೋಧರಾಗಿ ಪರಿವರ್ತನೆ ಆಗುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪಡೆದು ಭವಿಷ್ಯದ ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದರು.
ತರಬೇತಿ ಬಳಿಕ ದೇಶದ ವಿವಿಧ ವಾಯು ಸೇನೆಯ ವಲಯಗಳಿಗೆ ಆಯ್ಕೆ ಮಾಡಲಾಗುವುದು. ನಾಲ್ಕು ವರ್ಷಗಳ ಕರ್ತವ್ಯದ ಆಧಾರದ ಮೇಲೆ ಶೇ.25ರಷ್ಟು ಯುವಕರನ್ನು ಮುಂದುವರಿಸಲಾಗುವುದು. ಇನ್ನುಳಿದವರು ಕೇಂದ್ರ, ರಾಜ್ಯ ಸರ್ಕಾರ, ಖಾಸಗಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬಹುದಾಗಿದೆ. ಎಲ್ಲ ವಲಯದಲ್ಲಿಯೂ ನಿಮಗೆ ಅವಕಾಶ ಸಿಗಲಿದೆ. ಜತೆಗೆ ಉನ್ನತ ವ್ಯಾಸಂಗ ಪಡೆದು ಬೇರೆ ನೌಕರಿ ಗಿಟ್ಟಿಸಿಕೊಳ್ಳಲು ಸಾಧ್ಯವಿದೆ. ಇಲ್ಲಿ ಪಡೆದ ತರಬೇತಿ ನಿಮ್ಮ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದರು.
ಭಾರತೀಯ ವಾಯು ಸೇನೆ ಜಗತ್ತಿನ ಅತ್ಯಂತ ಬಲಿಷ್ಠ ವಾಯು ಪಡೆಗಳಲ್ಲಿ ಒಂದಾಗಿದೆ. ತರಬೇತಿ ವೇಳೆ ಸಮಯ ವ್ಯರ್ಥ ಮಾಡದೆ ಬೆಳಗ್ಗೆಯಿಂದ ಸಂಜೆವರೆಗೆ ಉತ್ತಮ ತರಬೇತಿ ಪಡೆದು ಯಶಸ್ವಿ ಅಗ್ನಿವೀರವಾಯುಗಳಾಗಿ ಪರಿವರ್ತನೆ ಆಗಬೇಕು. ನಿಮ್ಮ ಗುಣಮಟ್ಟದ ಸಾಮರ್ಥ್ಯದ ಮೇಲೆ ನಿಮ್ಮ ಭವಿಷ್ಯ ಅಡಗಿದೆ. ಶಿಸ್ತು, ಸಂಯಮ, ಸಹನಾ ಶಕ್ತಿ, ಮಾನಸಿಕ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದರು. ನಂತರ ಅಗ್ನಿವೀರವಾಯು ಅಭ್ಯರ್ಥಿಗಳ ಬಳಿ ಹೋಗಿ ಸಂವಾದ ನಡೆಸಿದರು. ಉತ್ತಮ ತರಬೇತಿ ಪಡೆಯುವಂತೆ ಸಲಹೆ ನೀಡಿದರು.
ಜುಲೈನಲ್ಲಿ ಮಹಿಳಾ ಬ್ಯಾಚ್‌ಗೆ ತರಬೇತಿ
ಅಗ್ನಿವೀರವಾಯು ಮಹಿಳಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಎರಡು ತಿಂಗಳ ಬಳಿಕ ಈ ಪ್ರಕ್ರಿಯೆ ಎಲ್ಲವೂ ಮುಗಿಯಲಿದೆ. 2023ರ ಜುಲೈ ಆರಂಭದಲ್ಲಿ ತರಬೇತಿ ಶುರುವಾಗಲಿದೆ. ಹೆಚ್ಚೆಚ್ಚು ಯುವಕ-ಯುವತಿಯರು ಅಗ್ನಿವೀರವಾಯುಗಳಾಗಲು ಉತ್ಸುಕರಾಗಿದ್ದು ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷಗಳ ನಂತರ ಕೇಂದ್ರ, ರಾಜ್ಯ ಸರ್ಕಾರ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದಾಗಿದೆ ಎಂದು ಭಾರತೀಯ ವಾಯು ಸೇನೆಯ ಕಮಾಂಡಿಂಗ್ ಇನ್ ಏರ್ ಚೀಫ್ ಮಾರ್ಷಲ್ ಮನವೇಂದ್ರ ಸಿಂಗ್ ತಿಳಿಸಿದರು.