ನವದೆಹಲಿ : ಎಂದೂ ಕಂಡು-ಕೇಳರಿಯದಂತಹ ದುರಂತದ ಘಟನೆಯೊಂದಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಇಂದು ಸಾಕ್ಷಿಯಾಗಿದೆ. ಹೆಣಗಳನ್ನು ಸುಡಲು ಸಾಲುಗಟ್ಟಿ ನಿಂತ ದೃಶ್ಯಗಳು ಕೋವಿಡ್ ಮಹಾಮಾರಿ ಸೃಷ್ಠಿಸುತ್ತಿರುವ ಭೀಕರತೆಗೆ ಸಾಕ್ಷಿಯಾಗಿದೆ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಚೀನಿ ವೈರಸ್‍ಗೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದು ಎಷ್ಟರ ಮಟ್ಟಿಗೆಯಂದರೆ ಕೋವಿಡ್‍ಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೂ ಕ್ಯೂ ಹಚ್ಚಬೇಕಾದ ದುಸ್ಥಿತಿ ಬಂದೊದಗಿದೆ.
ಇಂದು ( ಮಂಗಳವಾರ) ಕೋವಿಡ್-19 ನಿಂದ ಮೃತಪಟ್ಟ 50 ಮಂದಿಯನ್ನು ಮೈದಾನವನ್ನೇ ಸ್ಮಶಾನವಾಗಿ ಪರಿವರ್ತಿಸಿ, ಎತ್ತರದ ಕಟ್ಟಿಗೆಯ ಛಾವಣಿ ಮೇಲಿಟ್ಟು ಸಾಮೂಹಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.
ಒಂದು ಕಡೆ ಬೆಂಕಿಯಿಂದ ಚಿತೆ ಉರಿಯುತ್ತಿದ್ದರೆ ಮತ್ತೊಂದೆಡೆ ಕೆಳಗಡೆ ಒಂದಿಷ್ಟು ಶವಗಳನ್ನು ಮಲಗಿಸಲಾಗಿತ್ತು. ಶವ ಸಂಸ್ಕಾರ ಮಾಡಲು 16 ರಿಂದ 20 ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿರುವುದಾಗಿ ಸಂಬಂಧಿಕರು ತಮ್ಮ ಗೋಳನ್ನು ಹೇಳುತ್ತಿದ್ದರು.
ನನ್ನ ಜೀವನದಲ್ಲಿಯೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ನೋಡಿರಲಿಲ್ಲ. ದೆಹಲಿಯ ಎಲ್ಲಾ ಸ್ಮಶಾನಗಳು ಮೃತದೇಹಗಳಿಂದ ತುಂಬಿ ಹೋಗಿವೆ ಎಂದು ಮಾಸ್ಸಿ ಚಿತಾರಾಗದ ಮಾಲೀಕ ವಿನೀತಾ ಮಾಸ್ಸಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಇನ್ನು ಅಧಿಕೃತ ಮಾಹಿತಿಗಳ ಪ್ರಕಾರ ಏಪ್ರಿಲ್ ತಿಂಗಳಲ್ಲಿ 3,601 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕಳೆದ ಏಳು ದಿನಗಳ ಅವಧಿಯಲ್ಲಿ 2,267 ಜನರು ಸಾವನ್ನಪ್ಪಿದ್ದಾರೆ. ಫೆಬ್ರವರಿಯಲ್ಲಿ 57, ಮಾರ್ಚ್ ನಲ್ಲಿ 117 ಮಂದಿ ಸಾವನ್ನಪ್ಪಿದ್ದರು.