ಹೊಸದಿಲ್ಲಿ : ಕಳೆದ ಅ.12ರಂದು ದಿಲ್ಲಿ ಮಂತ್ರಾಲಯದ ಗೇಟ್ ನಂಬರ 3ರಿಂದ ಕಳವಾಗಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಘಾಜಿಯಾಬಾದ್‌ನಲ್ಲಿ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರು ತಮ್ಮ ರಾಜಕೀಯ ಜೀವನದ ಆರಂಭದ ಹಂತದಲ್ಲಿ ಈ ಕಾರನ್ನು ಬಳಸುತ್ತಿದ್ದರು. ಈ ಕಾರನ್ನು ಆಮ್ ಆದ್ಮಿ ಪಾರ್ಟಿಯ ಬೆಂಬಲಿಗ, ಹಾಗೂ ಅನಂತರ ವಿದೇಶಕ್ಕೆ ಹೋಗಿದ್ದ, ಕುಂದನ್ ಶರ್ಮಾ ಎಂಬವರು ಕೇಜ್ರಿವಾಲ್‌ಗೆ ದಾನವಾಗಿ ನೀಡಿದ್ದರು.
ಆಮ್ ಆದ್ಮಿ ಪಾರ್ಟಿ ಹೆಸರಿನಲ್ಲೇ ಕಾರನ್ನು ನೋಂದಾಯಿಸಲಾಗಿತ್ತು. ಪಕ್ಷದ ಮಾಧ್ಯಮ ಸಂಚಾಲಕಿ ವಂದನಾ ಸಿಂಗ್ ಈ ಕಾರನ್ನು ಬಳಸುತ್ತಿದ್ದರು.
ದಿಲ್ಲಿ ಮಂತ್ರಾಲಯದ ಎದುರಿನಿಂದ ಈ ಕಾರು ಕಳವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಆಪ್, ನಗರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕಳಪೆಯಾಗಿರುವುದಕ್ಕೆ ಲೆ| ಗವರ್ನರ್ ಅನಿಲ್ ಬೈಜಾಲ್ ಅವರನ್ನು ಟೀಕಿಸಿತ್ತು. ಆಪ್ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು.