ದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿ ಎರಡು ದಿನಗಳ ಹಿಂದೆಯಷ್ಟೇ ತಿಹಾರ್ ಜೈಲಿನಿಂದ ಹೊರಬಂದಿದ್ದ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಪ್ರಮುಖ ಘೋಷಣೆಯೊಂದು ಮಾಡಿದ್ದಾರೆ. ಇನ್ನು ಎರಡು ದಿನದೊಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಪಕ್ಷದ ಕಚೇರಿಗೆ ಭೇಟಿ ನೀಡಿದ ಅವರು ಈ ಘೋಷಣೆ ಮಾಡಿದರು. “ಎರಡು ದಿನಗಳ ನಂತರ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ, ಜನರು ತೀರ್ಪು ನೀಡುವವರೆಗೆ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಪ್ರತಿ ಮನೆ ಮತ್ತು ಬೀದಿಗೆ ಹೋಗುತ್ತೇನೆ. ಜನರಿಂದ ತೀರ್ಪು ಬರುವವರೆಗೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ” ಎಂದು ಹೇಳಿದರು.
“ಸುಪ್ರೀಂ ಕೋರ್ಟ್ ವಿಧಿಸಿರುವ ನಿರ್ಬಂಧಗಳ ಕಾರಣದಿಂದ ನಾವು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಅವರು ನಮ್ಮ ಮೇಲೆ ನಿರ್ಬಂಧಗಳನ್ನು ಹೇರಲು ಯಾವುದೇ ಸಾಧ್ಯತೆಗಳನ್ನು ಬಿಡಲಿಲ್ಲ… ನಾನು ಪ್ರಾಮಾಣಿಕ ಎಂದು ನಿಮಗೆ ಅನಿಸಿದರೆ ಮತ ಹಾಕಿ. ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಚುನಾಯಿತರಾದ ನಂತರವೇ ನಾನು ಕುಳಿತುಕೊಳ್ಳುತ್ತೇನೆ. ಮುಂದಿನ 2-3 ದಿನಗಳಲ್ಲಿ ಪಕ್ಷವು ಮುಖ್ಯಮಂತ್ರಿಯನ್ನು ನೇಮಕ ಮಾಡಲಿದೆ. ಶಾಸಕರ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ಸಿಎಂ ನಿರ್ಧರಿಸಲಾಗುವುದು” ಎಂದರು.
ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ರ ಧೈರ್ಯವನ್ನು ಒಡೆಯುವುದು ಅವರ ಗುರಿ, ಅದಕ್ಕೆ ಅವರು ನನ್ನನ್ನು ಜೈಲಿಗೆ ಕಳುಹಿಸಿದರು. ನನ್ನನ್ನು ಜೈಲಿನಲ್ಲಿಟ್ಟ ನಂತರ ಅವರು ನಮ್ಮ ಪಕ್ಷವನ್ನು ಒಡೆದು ದೆಹಲಿಯಲ್ಲಿ ಸರ್ಕಾರ ರಚಿಸುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ ನಮ್ಮ ಪಕ್ಷ ಒಡೆಯಲಿಲ್ಲ. ನಾನು ಭಾರತದ ಸಂವಿಧಾನವನ್ನು ರಕ್ಷಿಸುವ ಉದ್ದೇಶದಿಂದ ಜೈಲಿನಲ್ಲಿರುವಾಗ ರಾಜೀನಾಮೆ ನೀಡಲಿಲ್ಲ. ನಾನು ಅವರ ಸೂತ್ರವನ್ನು ವಿಫಲಗೊಳಿಸಲು ಬಯಸಿದ್ದೆ. ಸರ್ಕಾರವನ್ನು ಜೈಲಿನಿಂದ ಏಕೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ” ಎಂದು ಹೇಳಿದರು.