ವಿಜಯಪುರ: ಕೆಲವೇ ದಿನಗಳ ಹಿಂದಷ್ಟೇ ಯತ್ನಾಳ ಕೇವಲ ನಮ್ಮ ಪಕ್ಷದ ಓರ್ವ ಶಾಸಕ ಮಾತ್ರ. ಅವರ ಮಾತಿಗೆ ಹೆಚ್ಚಿನ ಬೆಲೆ ನೀಡುವ ಅಗತ್ಯವಿಲ್ಲ ಎಂದಿದ್ದ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ಸ್ವಯಂ ಸ್ವಪಕ್ಷೀಯ ಶಾಸಕ ಯತ್ನಾಳ ಅವರನ್ನು ಭೇಟಿಯಾಗಿ ಪರಸ್ಪರ ಗೌಪ್ಯ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.
ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದ ಬಳಿಕ ಮಂಗಳವಾರ ಜಿಲ್ಲೆಯ ಪಕ್ಷ ಸಂಘಟನೆಗಾಗಿ ಅರುಣ್ ಸಿಂಗ್ ಆಗಮಿಸಿದ್ದರೂ ಸದರಿ ಸಭೆಗಳಿಗೆ ಹಾಜರಾಗದೇ ಅವರಿಂದ ಯತ್ನಾಳ ಅಂತರ ಕಾಯ್ದುಕೊಂಡಿದ್ದರು.
ಜಿಲ್ಲೆಯ ಪಕ್ಷ ಸಂಘಟನೆ ಕಾರ್ಯಕ್ರಮಗಳು ಮುಗಿಯುತ್ತಲೇ ವಿಜಯಪುರ ನಗರಕ್ಕೆ ಧಾವಿಸಿ ಬಂದಿರುವ ಅರುಣಸಿಂಗ್, ಸಂಜೆ ವೇಳೆ ಶಾಸಕ ಯತ್ನಾಳ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಶಾಸಕ ಯತ್ನಾಳ ಸಾರಥ್ಯದಲ್ಲಿ ನಡೆಯುತ್ತಿರುವ ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೈಪರ್ ಮಾರ್ಟ್ ನಲ್ಲಿ ಯತ್ನಾಳ ಅವರನ್ನು ಅರುಣ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Related Articles
ಅರುಣ್ ಸಿಂಗ್ ಅವರೊಂದಿಗೆ ಪಕ್ಷದ ಸಿಂದಗಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ ಸೇರಿದಂತೆ ಹಲವು ನಾಯಕರಿದ್ದರೂ, ಎಲ್ಲರೊಂದಿಗೆ ಒಂದು ಫೋಟೋಗೆ ಫೋಸ್ ಕೊಟ್ಟ ಬಳಿಕ ಇತರೆ ಎಲ್ಲ ನಾಯಕರನ್ನೂ ಹೊರಗಿಟ್ಟ ಅರುಣ್ ಸಿಂಗ್, ಕೇವಲ ಯತ್ನಾಳ ಅವರನ್ನು ಮಾತ್ರ ಕರೆದೊಯ್ದು ಪ್ರತ್ಯೇಕ ಹಾಗೂ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ : ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ: 6 ಮಂದಿ ಸಾವು, ದೆಹಲಿಯಲ್ಲೂ ಕಂಪಿಸಿದ ಭೂಮಿ
ತಮ್ಮಿಬ್ಬರ ಮಧ್ಯೆ ನಡೆದ ಆಂತರಿಕ ಮಾತುಕತೆ ವಿವರಗಳು ಏನೆಂದು ಇಬ್ಬರೂ ನಾಯಕರು ಬಹಿರಂಗ ಪಡಿಸಿಲ್ಲ.
ಹೀಗಾಗಿ ಹಿಂದು ಪೈರ್ ಬ್ರ್ಯಾಂಡ್, ಬಿಜೆಪಿ ರೆಬೆಲ್ ಲೀಡರ್ ಎಂದೆ ಗುರುತಿಸಿಕೊಂಡಿರುವ ಯತ್ನಾಳ ವಿರುದ್ದ ಸಾಮಾನ್ಯ ಶಾಸಕ ಮಾತ್ರ ಎಂದಿದ್ದ ಯತ್ನಾಳ ಅವರೊಂದಿಗೇ ಅರುಣ್ ಸಿಂಗ್ ತಮ್ಮೊಂದಿಗಿದ್ದ ಎಲ್ಲ ನಾಯಕರನ್ನೂ ಹೊರಗಿಟ್ಟು ಗೌಪ್ಯ ಮಾತುಕತೆ ನಡೆಸಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಪಕ್ಷದ ವಲಯದಲ್ಲೂ ಅರುಣ್ ಸಿಂಗ್, ಯತ್ನಾಳ ಭೇಟಿಯ ವಿಷಯವೇ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಕಲ್ಪಿಸಿದೆ.