ಬೆಂಗಳೂರು: ದೂರವಾಣಿ ಕದ್ದಾಲಿಕೆಕುರಿತು ರಾಜ್ಯ ಸರ್ಕಾರದ ವಿರುದ್ಧವೇ ನೇರ ಆರೋಪ ಮಾಡಿದ್ದ ಶಾಸಕ ಅರವಿಂದ ಬೆಲ್ಲದ ವಿರುದ್ಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗರಂ ಆಗಿದ್ದಾರೆ. ಗುರುವಾರ ಏಕಾಏಕಿಯಾಗಿ ತಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಮುಜುಗರವಾಗುವಂತೆ ಮಾಡಿತ್ತು. ಅದೇ ಕಾರಣಕ್ಕೆ ಅರವಿಂದ ಬೆಲ್ಲದ ಭೇಟಿಗೆ ಅರುಣ್ ಸಿಂಗ್ ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಶುಕ್ರವಾರ ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ ಅರವಿಂದ ಬೆಲ್ಲದ ಆಗಮಿಸಿದ ಸಂದರ್ಭದಲ್ಲಿ ಅರುಣ್ ಸಿಂಗ್ ಅವರ ಭೇಟಿಗೆ ಸಮಯ ನೀಡಿರುವ ಬಗ್ಗೆ ತಮ್ಮ ಆಪ್ತ ಸಹಾಯಕರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಮತ್ತೇಕೆ ಭೇಟಿ ಮಾಡುವುದು ಎಂದು ನಿರಾಕರಿಸಿದ್ದರು ಎನ್ನಲಾಗಿದೆ.
ಆದರೆ, ಪಕ್ಷದ ಶಾಸಕರನ್ನು ಭೇಟಿ ಮಾಡಲು ನಿರಾಕರಿಸಿದರೆ ಬೇರೆ ಸಂದೇಶ ಹೋಗುತ್ತದೆ ಎಂದು ಪಕ್ಷದ ನಾಯಕರ ಸಲಹೆ ಮೇರೆಗೆ ಬೆಲ್ಲದ ಭೇಟಿಗೆ ಅವಕಾಶ ನೀಡಿದ್ದರು ಎನ್ನಲಾಗಿದೆ. ಭೇಟಿಯ ಸಂದರ್ಭದಲ್ಲಿ ಅರವಿಂದ ಬೆಲ್ಲದ ಅವರಿಗೆ ನೇರವಾಗಿಯೇ, ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತೀರಿ, ಅದನ್ನೇ ಮಾಡಿಕೊಂಡು ಹೋಗಿ ಎಂದು ಅರುಣ್ ಸಿಂಗ್ ಗರಂ ಆಗಿಯೇ ಹೇಳಿದರು ಎಂದು ತಿಳಿದು ಬಂದಿದೆ.
ಇನ್ನು ಮುಂದೆ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆ ನೀಡದೇ ಪಕ್ಷದ ವೇದಿಕೆಯಲ್ಲಿಯೇ ನಿಮ್ಮ ಸಮಸ್ಯೆಯನ್ನು ಚರ್ಚಿಸಿ ಎಂದು ಅರುಣ್ ಸಿಂಗ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಅರವಿಂದ ಬೆಲ್ಲದ ತಾವು ಫೋನ್‌ಕದ್ದಾಲಿಕೆಯ ಬಗ್ಗೆ ಬಹಿರಂಗ ಪಡಿಸದೇ ಇದ್ದಿದ್ದರೆ, ತಮ್ಮ ವಿರುದ್ಧ ಸಿಸಿಬಿ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಜೆ.ಪಿ. ನಡ್ಡಾ ಅವರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಮನೆಗೆ ಕರೆಯಿಸಿ, ದೂರವಾಣಿ ಮೂಲಕ ಬುದ್ದಿವಾದ ಹೇಳಿದ್ದರು ಎಂದು ತಿಳಿದು ಬಂದಿದೆ.