ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರದ ಮೂಲಕ ಕನ್ನಡಕ್ಕೆ ಹೊಸ ಗಾಯಕಿಯ ಪರಿಚಯವಾಗುತ್ತಿದೆ. ಆ ಗಾಯಕಿ ಯಾರು ಗೊತ್ತಾ? ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಮುದ್ದಿನ ಮಗಳು ಅದಿತಿ. 15 ವರ್ಷದ ಅದಿತಿ ಈಗ “ರ್‍ಯಾಂಬೋ 2′ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಪರಿಚಿತರಾಗಲಿದ್ದಾರೆ. ಈ ಚಿತ್ರಕ್ಕಾಗಿ ಅದಿತಿ ಅವರಿಂದ “ಧಮ್ ಮಾರೋ ಧಮ್ …’ ಎಂಬ ಹಾಡನ್ನು ಹಾಡಿಸಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಈ ಹಾಡು ಇಂದು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಲಿದೆ. ಶರಣ್ ತಮ್ಮ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ “ರ್‍ಯಾಂಬೋ 2′ ಚಿತ್ರವು ಬಿಡುಗಡೆಯಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಇವರೆಲ್ಲಾ ವರ್ಕಿಂಗ್ ಪಾಟ್ನರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆಯಂತೆ. ಈ ಹಿಂದೆ “ದಿಲ್‌ವಾಲ’ ಚಿತ್ರ ಮಾಡಿದ್ದ ಅನಿಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಇದು “ರ್‍ಯಾಂಬೋ’ ಚಿತ್ರದ ಮುಂದುವರಿದ ಭಾಗವೇ ಎಂದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಮೂಲಗಳ ಪ್ರಕಾರ, “ರ್‍ಯಾಂಬೋ’ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಟೈಟಲ್ ಇಡಲು ಕಾರಣ “ರ್‍ಯಾಂಬೋ’ ಟೀಂ ಒಟ್ಟಾಗಿರೋದು ಅಷ್ಟೇ.