ಕನ್ನಡದಲ್ಲಿ ಈಗಂತೂ ಹೊಸ ಬಗೆಯ ಶೀರ್ಷಿಕೆವುಳ್ಳ ಚಿತ್ರಗಳು ಸೆಟ್ಟೇರುತ್ತಿವೆ. ಅದರಲ್ಲೂ ವಿಭಿನ್ನ ಶೀರ್ಷಿಕೆ ಚಿತ್ರಗಳೇ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸುತ್ತಿವೆ. ಈಗ ಅಂಥದ್ದೇ ಭಿನ್ನವಾಗಿರುವ ಶೀರ್ಷಿಕೆ ಹೊತ್ತು ಚಿತ್ರವೊಂದು ಸೆಟ್ಟೇರುತ್ತಿದೆ. ಆ ಚಿತ್ರದ ಹೆಸರು “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಅಂದಹಾಗೆ, ಈ ಚಿತ್ರವನ್ನು ಅರುಣ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಲೂಸ್‌ಗಳು’ ಚಿತ್ರ ನಿರ್ದೇಶಿಸಿದ್ದ ಅರುಣ್, ಈಗ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಶೀರ್ಷಿಕೆ ಹೇಳುವಂತೆ, ಇದು ಪಕ್ಕಾ ಯೂಥ್ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟಕ್ಕೂ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಪದ ಬಹಳಷ್ಟು ಶಾಲಾ ಸಮಾರಂಭದಲ್ಲೇ ಕೇಳಿಬರುತ್ತೆ. ಅಂಥದ್ದೊಂದು ಪದ ಬಳಕೆಯನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿ ಚಿತ್ರ ಮಾಡಲು ಹೊರಟಿದ್ದಾರೆ ನಿರ್ದೇಶಕ ಅರುಣ್. “ಇದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕುರಿತ ಚಿತ್ರ. ಹೈಸ್ಕೂಲ್ ಲೈಫ್ ಕಳೆದ, ಕಳೆಯುತ್ತಿರುವ ಹುಡುಗರ ಕಥೆ ಇಲ್ಲಿದೆ.
ಇಲ್ಲಿ ಬಹುತೇಕ 16 ರಿಂದ 20 ವರ್ಷದೊಳಗಿನ ಪ್ರತಿಭೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಯುವ ಮನಸ್ಸುಗಳ ತಲ್ಲಣ, ತಳಮಳ, ಅವರ ಆಲೋಚನೆ ಇತ್ಯಾದಿ ವಿಷಯಗಳ ಮೇಲೆ ಚಿತ್ರ ಸಾಗಲಿದೆ. ಹಾಗಂತ ಇಲ್ಲಿ ಲವ್ ಇರುತ್ತಾ ಎಂಬ ಪ್ರಶ್ನೆ ಎದುರಾಗಬಹುದು. ಆ ಹಂತದ ಹುಡುಗರಲ್ಲಿ ಪ್ರೀತಿಗಿಂತ ಕ್ರಷ್ ಇರುತ್ತೆ. ಅದನ್ನೇ ಇಲ್ಲಿ ಹೈಲೆಟ್ ಮಾಡಿಕೊಂಡು ಚಿತ್ರ ಮಾಡಲಾಗುತ್ತಿದೆ.
ಆ ವಿದ್ಯಾರ್ಥಿಗಳ ತುಂಟಾಟಗಳು, ಮಧುರ ನೆನಪುಗಳು ಇತ್ಯಾದಿ ವಿಷಯಗಳು ಇಲ್ಲಿರಲಿವೆ. ಬಹುತೇಕ ಮಲೆನಾಡ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಆಡಿಷನ್ ಮಾಡಬೇಕಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ಅರುಣ್. ಈ ಚಿತ್ರವನ್ನು ವೆರೈಟಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಬ್ರಹ್ಮಣ್ಯ ಕೊಕ್ಕೆ ಮತ್ತು ಶಿವಲಿಂಗೇಗೌಡ ನಿರ್ಮಾಣ ಮಾಡುತ್ತಿದ್ದಾರೆ.
ಇವರಿಗೆ ಇದು ಮೊದಲ ಚಿತ್ರ. ಈಗಾಗಲೇ ಯುವ ಪ್ರತಿಭೆಗಳಿಗೆ ಹುಡುಕಾಟ ಶುರುವಾಗಿದ್ದು, ಅವರಿಗೆ ವರ್ಕ್‌ಶಾಪ್ ನಡೆಸಿ, ನಂತರ ಚಿತ್ರೀಕರಣಕ್ಕೆ ಹೋಗುವ ಯೋಚನೆ ನಿರ್ದೇಶಕರಿಗಿದೆ. ಚಿತ್ರಕ್ಕೆ ವಿಜೇತ್, ವಾಸು ದೀಕ್ಷಿತ್, ಶೇಷಗಿರಿ ಸಂಗೀತ ನೀಡುತ್ತಿದ್ದಾರೆ. ಚಿದಾನಂದ್ ಛಾಯಾಗ್ರಹಣವಿದೆ. ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆ.