Advertisement

ಹತ್ತು ತಿಂಗಳಲ್ಲಿ 4 ಪ್ರಭಾವಿ ನಾಯಕರನ್ನು ಕಳೆದುಕೊಂಡ BJP;ಮೋದಿ 2.0 ಕ್ಯಾಬಿನೆಟ್ ಗೆ ನಷ್ಟ

09:13 AM Aug 25, 2019 | Nagendra Trasi |

ನವದೆಹಲಿ: ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ತುಂಬಲಾರದ ನಷ್ಟ. ಅದರಲ್ಲಿಯೂ ನರೇಂದ್ರ ಮೋದಿ ಅವರ ಎರಡನೇ ಅವಧಿಯ 2.0 ಸರಕಾರದಲ್ಲಿ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದ ಜೇಟ್ಲಿ ಹಾಗೂ ಮಾನವೀಯ ಮುಖದ ಸುಷ್ಮಾ ಸ್ವರಾಜ್ ನಿಧನದಿಂದಾಗಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರಕಾರದಲ್ಲಿ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅತ್ಯಂತ ನಂಬಿಕಸ್ಠ ಹಾಗೂ ಡೈನಾಮಿಕ್ ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಬ್ರ್ಯಾಂಡ್ ಅನ್ನು ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದನ್ನು ನೆನಪಿಸಿಕೊಳ್ಳಬೇಕು.

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ಸಂದರ್ಭದಲ್ಲಿಯೇ ಟ್ರಬಲ್ ಶೂಟರ್ ಎನ್ನಿಸಿಕೊಂಡಿದ್ದ ಅರುಣ್ ಜೇಟ್ಲಿ, ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಜನಾನುರಾಗಿಯಾಗಿದ್ದ ಸುಷ್ಮಾ ಸ್ವರಾಜ್ ಮತ್ತು ಮನೋಹರ್ ಪರ್ರೀಕರ್, ಕೇಂದ್ರ ಸಚಿವರಾಗಿದ್ದ ಕರ್ನಾಟಕದ ಅನಂತ್ ಕುಮಾರ್ ಕ್ಯಾಬಿನೆಟ್ ನಲ್ಲಿ ಇಲ್ಲದಿರುವುದು ಮೋದಿ ಸಂಪುಟ ದೊಡ್ಡ ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಜೇಟ್ಲಿ ನಿಕಟವರ್ತಿಯಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೋದಿ ಸರಕಾರ ಸಚಿವರ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ಅರುಣ್ ಜೇಟ್ಲಿ!

Advertisement

ಪ್ರಧಾನಿ ಮೋದಿಯ ಮೊದಲ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಅಧಿಕಾರದ ಹಂಚಿಕೆಯನ್ನು ಕೂಡಾ ಜೇಟ್ಲಿ ಬದಲಾಯಿಸಿಬಿಟ್ಟಿದ್ದರು. ಮೊದಲು ಹೇಗಿತ್ತೆಂದರೆ ಕೇಂದ್ರ ಗೃಹ ಸಚಿವರನ್ನು ಸಂಪುಟದಲ್ಲಿ ನಂ.2 ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಮೋದಿಯ ಮೊದಲ 5 ವರ್ಷದ ಅವಧಿಯಲ್ಲಿ ವಿತ್ತ ಸಚಿವರೇ ಅತ್ಯಂತ ಪ್ರಭಾವಿ(ನಂ.2) ಎಂದು ಬದಲಾಯಿಸಿದ್ದರು.!

ಆ ನಿಟ್ಟಿನಲ್ಲಿಯೇ ಪ್ರಧಾನಿ ಮೋದಿ ಅವರು ಹಣಕಾಸು ಸಚಿವಾಲಯದ ಮೂಲಕವೇ ಜನ್ ಧನ್ ಯೋಜನೆ, ಆಧಾರ್ ಸಂಪರ್ಕ, ನೋಟು ಅಪನಗದೀಕರಣ, ಜಿಎಸ್ ಟಿ, ಬೇನಾಮಿ ಆಸ್ತಿ ಕಾನೂನನ್ನು ಅನುಷ್ಠಾನಗೊಳಿಸಿದ್ದರು.

ಸುಷ್ಮಾ ಸ್ವರಾಜ್-ಮಾನವೀಯತೆ ಮುಖ:

ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೋದಿ ಅವರು 90ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡುವ ಮೂಲಕ ಬ್ರ್ಯಾಂಡ್ ಇಂಡಿಯಾದ ಬಗ್ಗೆ ಗಮನಸೆಳೆಯುವ ಮೂಲಕ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನ ನಡೆಸಿದ್ದರು.

ಇದರ ಜೊತೆಗೆ ಸ್ವರಾಜ್ ಪ್ರತಿಯೊಂದು ಹಂತದಲ್ಲಿಯೂ ದ್ವಿಪಕ್ಷೀಯ ಮಾತುಕತೆ ಮೂಲಕ ಮೋದಿ ಕಾರ್ಯಕ್ಕೆ ಸಾಥ್ ನೀಡಿದ್ದರು. ವಿದೇಶದಲ್ಲಿ ಯಾವುದೇ ಭಾರತೀಯರು ತೊಂದರೆಗೊಳಗಾದಲ್ಲಿ ತಕ್ಷಣಕ್ಕೆ ಸ್ಪಂದಿಸುತ್ತಿದ್ದವರು ಸುಷ್ಮಾ ಸ್ವರಾಜ್. ಅವರ ಕಾರ್ಯವೈಖರಿ ಹೇಗಿತ್ತು ಎಂದರೆ ವೀಸಾ ನೀಡುವಿಕೆಯಂತಹ ವಿಷಯಗಳನ್ನು ಕೂಡಾ ವೈಯಕ್ತಿಕ ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next