Advertisement

ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಕಲಾಪದವಿ 

09:30 AM Jun 10, 2018 | Team Udayavani |

ಇದೀಗ ಪದವಿ ತರಗತಿಗಳಿಗೆ ಸೇರ್ಪಡೆಯ ಭರಾಟೆ. ಯಾವ ಕಾಲೇಜಿನಲ್ಲಿಯೇ ಕೇಳಿ. ವಾಣಿಜ್ಯ ಹಾಗೂ ವಿಜ್ಞಾನ ಪದವಿಗಳು ಹೌಸ್‌ಫ‌ುಲ್‌. ಆದರೆ ಕಲಾ ಪದವಿಗೆ ಪ್ರವೇಶದ ಕೊರತೆ. ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಯಲ್ಲಿ ಕಲಾ ಪದವಿ ಕಾದು ಕುಳಿತಿದೆ. ಕೆಲವೇ ಮಂದಿ ಸ್ವ ಇಚ್ಛೆಯಿಂದ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಇಲಾಖೆ ನಿಗದಿ ಪಡಿಸಿದ ದಾಖಲಾತಿ ಸಂಖ್ಯೆಯ ಗುರಿ ಮುಟ್ಟುವಲ್ಲಿಯೂ ಸೇರ್ಪಡೆಯ ಅಭಾವ. ಈ ಸಮಸ್ಯೆ ಕೇವಲ ಅನುದಾನ ರಹಿತ ಅಥವಾ ಅನುದಾನ ಸಹಿತ ಪದವಿ ಕಾಲೇಜಿಗಷ್ಟೇ ಸೀಮಿತವಲ್ಲ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳೂ ಇದೇ ಸಮಸ್ಯೆಯಿಂದ ಬಳಲುತ್ತಿವೆ. ಸ್ಥಿತಿ ಹೀಗೇ ಮುಂದುವರಿದರೆ ಕಲಾ ಪದವಿಯೇ ಕ್ರಮೇಣ ಕಣ್ಮರೆಯಾದೀತೆಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.

Advertisement

ಕೆಲವು ವರ್ಷಗಳ ಹಿಂದಿನ ಮಾತು. ಕಲಾ ಪದವಿಗೆ ವಿಶೇಷ ಮಹಣ್ತೀ. ಅದೊಂದು ವಿಧದ ಸಂಭ್ರಮ ಎಂದೇ ಭಾವಿಸಬಹುದು. ಬಿಎ , ಬಿಎಎಲ್‌ಎಲ್‌ಬಿ, ಮೊದಲಾದ ಪದವಿಗಳನ್ನು ಹೆಸರ ಮುಂದೆ ಅಂಟಿಸಿಕೊಳ್ಳುವುದೇ ಒಂದು ಪ್ರತಿಷ್ಠೆ. ಕಲಾ ವಿಭಾಗದಲ್ಲೂ ಎಲ್ಲಾ ವಿಭಾಗಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆ ಮೇಲುಗೈ. ಆದರೆ ಸಂಭ್ರಮದಲ್ಲಿದ್ದ ಕಲಾ ಪದವಿಗೆ ಇಂಥ ಸ್ಥಿತಿ ಬರಬಹುದೆಂದು ಯಾರೂ ಊಹಿಸಿರಲಿಲ್ಲ, ರಾಮನಿಗಾಗಿ ಶಬರಿ ಕಾದಂತೆ, ವಿದ್ಯಾರ್ಥಿಗಳಿಗಾಗಿ ಕಲಾ ಪದವಿ ಕಾಯುತ್ತಾ ಕುಳಿತಿದೆ. ಈ ಬಗ್ಗೆ ಶಿಕ್ಷಕ ಸಮುದಾಯದಲ್ಲಿ ಅಲ್ಲಲ್ಲಿ ಚರ್ಚೆಗಳೂ ನಡೆಯುತ್ತಿವೆ. 

ಹೀಗಾಗಲು ಕಾರಣಗಳೇನು?
ಇಂದಿನ ಸಮಾಜದಲ್ಲಿ ಕಲಾ ಪದವಿಯ ಬಗ್ಗೆ ಅನಗತ್ಯ ಅಸಡ್ಡೆ. ಇದರ ಕಲಿಕೆಯಿಂದ ಉದ್ಯೋಗಾವಕಾಶಗಳಿಲ್ಲ ಎಂಬ ವದಂತಿ. ಸತ್ಯ ಸಂಗತಿಗಳಿಗಿಂತ ಅನಗತ್ಯ ವದಂತಿಗಳಿಗೇ ಮನ್ನಣೆ. ವಿಚಾರ ವಿಮರ್ಶೆಗಿಂತ ಗಾಳಿ ಸುದ್ದಿಗೆ ಮಹಣ್ತೀ.

ಪದವಿಪೂರ್ವ ತರಗತಿಗಳಲ್ಲಿ ಕಲಾ ಪದವಿಯ ಸ್ಥಿತಿ ಚಿಂತಾಜನಕ. ಅನೇಕ ಪದವಿಪೂರ್ವ ಕಾಲೇಜುಗಳು ಇದಕ್ಕೆ ವಿದಾಯ ಹೇಳಿವೆ. ಇಂದಿನ ಮಾರುಕಟ್ಟೆ ಯುಗದಲ್ಲಿ ಇದು ಅಧಿಕ ಆದಾಯ ತರದು ಎಂಬ ಮನೋಭಾವ ಖಾಸಗಿ ಕಾಲೇಜುಗಳಲ್ಲಿ ಮನೆ ಮಾಡಿವೆ. ಮಾರುಕಟ್ಟೆ ಆಧಾರದಲ್ಲಿ ನಿಂತಿರುವ ಶಿಕ್ಷಣ ಕ್ಷೇತ್ರದಲ್ಲಿ ಆದಾಯ ತರದ ಕೋರ್ಸಿಗೆ ಯಾಕೆ ಮಣೆ ಹಾಕಬೇಕು ಎಂಬ ಲೆಕ್ಕಾಚಾರ.

ಪದವಿಪೂರ್ವ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಈಗ ದೊರಕುವ ಪುಕ್ಕಟೆ ಉಪದೇಶಗಳೂ ಕಲಾ ಪದವಿಯ ಭವಿಷ್ಯಕ್ಕೆ ಮಾರಕವಾಗಿದೆ. ಸಮಾಜದಲ್ಲಿ ಯಾರನ್ನೇ ಕೇಳಿ, ಯಾವುದೇ ಕಾರಣಕ್ಕೂ ಬಿ.ಎ. ಮಾಡಬೇಡ. ಏನೂ ಸ್ಕೋಪ್‌ ಇಲ್ಲ. ಇನ್ನು ಪದವಿಪೂರ್ವ ತರಗತಿಗಳಲ್ಲಿ ಉಪನ್ಯಾಸಕರೂ ತನ್ನ ವಿದ್ಯಾರ್ಥಿಗೆ ಇದೇ ಮಾತನ್ನು ಬೋಧಿಸುತ್ತಾರೆ. ಸರ್‌, ನನಗೆ ಬಿ.ಎ. ಮಾಡುವ ಆಸಕ್ತಿ ಎಂದರೆ ಸಾಕು, ಅದ್ಯಾಕೆ ಮಾರಾಯ, ಅದಕ್ಕಿಂತ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದು ಲೇಸು. ವಿದ್ಯಾರ್ಥಿಗಳಿಗೆ ಕಲಾ ಪದವಿಗಳಲ್ಲಿ ಆಸಕ್ತಿ ಮೂಡಿಸುವ ಬದಲು ಅವರ ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸ ಇಂದು ಶಾಲೆಯಿಂದ ಆರಂಭಿಸಿ ಮನೆ ಹಾಗೂ ಸಾರ್ವಜನಿಕ ವಲಯದಿಂದಲೂ ನಡೆಯುತ್ತಿದೆ. 

Advertisement

ಪದವಿಪೂರ್ವ ತರಗತಿಗಳಲ್ಲಿ ಅತ್ಯಂತ ಕಡಿಮೆ ಅಂಕ ಪಡೆದವರೂ ಬಯಸುವುದು ವಾಣಿಜ್ಯ ಅಥವಾ ವಿಜ್ಞಾನ ಪದವಿ. ಇಂಥ ವಿದ್ಯಾರ್ಥಿಗಳನ್ನು ಅವರ ಆಯ್ಕೆ ಕುರಿತು ಪ್ರಶ್ನಿಸಿದರೆ ಸಿ.ಎ. ಮಾಡುವ ಕನಸು ಎಂದು ಕೆಲವರು ಹೇಳಿದರೆ, ವಿಜ್ಞಾನಿಯಾಗುವ ಕನಸು ಎಂದು ಇನ್ನು ಕೆಲವರ ಉತ್ತರ. ಆದರೆ ಎಲ್ಲರಿಗೂ ಸಿ.ಎ. ಅಥವಾ ವಿಜ್ಞಾನಿಯಾಗಲು ಸಾಧ್ಯವೇ? ಅವರ ಕಲಿಕಾ ಸಾಮರ್ಥ್ಯಕ್ಕೆ ಇದು ನಿಲುಕುತ್ತದೆಯೇ? ಜೀವನದಲ್ಲಿ ಒಳ್ಳೆಯ ಕನಸುಗಳನ್ನು ಕಾಣಬೇಕು, ಕಟ್ಟಿಕೊಳ್ಳಬೇಕು ನಿಜ. ಆದರೆ ಕನಸನ್ನು ಕಾಣುತ್ತಾ ಕುಳಿತರಷ್ಟೇ ಸಾಕೇ? ಅದನ್ನು ನನಸಾಗಿರಿಸುವ ತನ್ನ ಸಾಮರ್ಥ್ಯದ ಬಗ್ಗೆ ಚಿಂತನೆ ಬೇಡವೇ? ಇದು ಸಿಎ ಅಥವಾ ವಿಜ್ಞಾನಿಯಾಗುವವರರ ಆತ್ಮವಿಶ್ವಾಸ ಕೆಡಿಸುವ ಹೇಳಿಕೆ ಎಂದು ಭಾವಿಸಬೇಡಿ. 

ಕಲಾ ಪದವಿಯ ಪುನರುಜ್ಜೀವನ ಸಾಧ್ಯವೇ?
ಪದವಿಪೂರ್ವ ಕಾಲೇಜುಗಳಲ್ಲಿ ಕಲಾ ಶಿಕ್ಷಣವನ್ನು ಮೊಟಕುಗೊಳಿಸದಿರುವುದು.ಆರ್ಥಿಕ ಲಾಭ ಅಥವಾ ಮಾರುಕಟ್ಟೆಗಿಂತ ಭಿನ್ನವಾಗಿ ಕಲಾ ಶಿಕ್ಷಣದತ್ತ ಯೋಚಿಸುವುದು.

– ಕಲಾ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಶಿಕ್ಷಣ ನೀಡುವ ಉದಾರತೆ ಸರಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗುವುದು.

– ಕಲಾ ಪದವಿಯಲ್ಲಿನ ಹಳೆಯ ಕೋರ್ಸುಗಳಿಗೆ ಮತ್ತೆ ಮತ್ತೆ ಜೋತು ಬೀಳುವುದನ್ನು ಕೊನೆಗಾಣಿಸಿ, ಹೊಸ ಹೊಸ ವಿಷಯಗಳನ್ನು ಬೇಡಿಕೆಯನ್ನಾದರಿಸಿ ಕಲಾ ಪದವಿಯಲ್ಲಿ ಸೇರ್ಪಡೆಗೊಳಿಸುವುದು.

– ಕಲಾ ಪದವಿಯ ವಿಷಯಗಳಲ್ಲಿ ವಾಣಿಜ್ಯ ಅಥವಾ ಇತರ ವಿಷಯಗಳಿಗೆ ಸಂಬಂಧಿಸಿದ ನೂತನ ಕಾಂಬಿನೇಶನ್‌ ಅಳವಡಿಸುವುದು. ಹಾಗೆಯೇ ವಾಣಿಜ್ಯ ಅಥವಾ ಇತರ ಬೇಡಿಕೆ ಕೋರ್ಸುಗಳಲ್ಲಿ ಕಲಾ ಪದವಿಯ ಒಂದೆರಡು ವಿಷಯಗಳನ್ನು ಸೇರಿಸುವುದು. ಇದರಿಂದ ಕಲಾ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್‌ ಮಾಡಿದವರನ್ನು ಉಪನ್ಯಾಸಕ ಹುದ್ದೆಗಳಲ್ಲಿ ಉಳಿಸಬಹುದು.

– ಈ ವಿಧದ ನೂತನ ಕಾಯಕಲ್ಪಗಳಿಗೆ ಸರಕಾರವೂ ಅನುದಾನದ ಕೃಪೆ ತೋರುವುದು.ಈ ಕ್ಷೇತ್ರದಲ್ಲಿ ಓದಿದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸೂಕ್ತ ಕೌಶಲ ತರಬೇತಿ ಹಾಗೂ ಅಗತ್ಯ ಪೋ›ತ್ಸಾಹ.

– ಕಲಾ ಪದವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಿರುವ ನಿರ್ಬಂಧಗಳನ್ನು ಸರಕಾರವು ತಾತ್ಕಾಲಿಕವಾಗಿ ತಡೆ ಹಿಡಿಯುವುದು.

ಕಲಾ ಪದವಿಗೆ ಭವಿಷ್ಯ ಇಲ್ಲವೇ? 
ಕಲಾ ಪದವಿಯನ್ನು ಓದಿದವರಿಗೂ ಉತ್ತಮ ಅವಕಾಶಗಳಿವೆ. ಈ ಬಗ್ಗೆ ಸೂಕ್ತ ಸಲಹೆ ಅಥವಾ ಮಾರ್ಗದರ್ಶನದ ಅಗತ್ಯವಿದೆ. 

1) ಐಎಎಸ್‌, ಕೆಎಎಸ್‌ ಪರೀಕ್ಷೆಗಳಿಗೆ ವಿಶೇಷ ಗಮನ ಹರಿಸುವಂತೆ ಸೂಚಿಸಬಹುದು. ಬಿ.ಎಡ್‌. ಎಲ್‌ಎಲ್‌ಬಿ, ಸ್ನಾತಕೋತ್ತರ ಪದವಿಗಳತ್ತ ದೃಷ್ಟಿ ಹರಿಸಬಹುದು.

2) ಸರಕಾರಿ ಉದ್ಯೋಗಗಳ ನೇಮಕಾತಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹಂತದಲ್ಲೇ ಪ್ರಯತ್ನಿಸುವುದು.

3) ಇಂದಿನ ಉದ್ಯೋಗಕ್ಕೆ ಅಗತ್ಯವಾದ ಗಣಕ ಯಂತ್ರದ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಮಾರ್ಗದರ್ಶನ,ಸೂಕ್ತ ಉದ್ಯೋಗ ಮಾಹಿತಿ ನೀಡುವುದು.

ಕಲಾ ಪದವಿಯನ್ನು ಏಕೆ ಉಳಿಸಬೇಕು? 
– ಸಂವಹನ ಕಲೆಗೆ ಇಂದು ಆದ್ಯತೆ. ಕಲಾ ಪದವಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್‌ ಭಾಷೆ ಐಚ್ಛಿಕ ವಿಷಯವಾಗಿರುವುದರಿಂದ ಸಂವಹನ ಕಲೆಯನ್ನು ಬೆಳೆಸಬಹುದು.

– ಭಾಷೆಯ ಶುದ್ಧ ಪ್ರಯೋಗ ಇಂದು ಸವಾಲಿನ ಸಂಗತಿ. ಕಲಾ ಪದವಿಯ ಭಾಷೆಯ ಐಚ್ಛಿಕ ವಿಷಯಗಳ ಕಲಿಕೆಯ ಮೂಲಕ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು.

– ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳು ಇಂದು ಗೌಣವಾಗುತ್ತಿವೆ. ಅವುಗಳಿಗೆ ಅಸ್ತಿತ್ವವಿಲ್ಲ ಎಂಬ ಭಾವನೆ ಬೆಳೆಯುತ್ತಿದೆ. ಕಲಾ ಪದವಿಯ ಉತ್ತೇಜನದ ಮೂಲಕ ದೇಶದ ಇತಿಹಾಸ, ಸಂಸ್ಕೃತಿ, ಸಾಹಿತ್ಯಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸುವುದು.

– ಬೌದ್ಧಿಕ ಬೆಳವಣಿಗೆಯಷ್ಟೇ ಭಾವನಾತ್ಮಕ ಬೆಳವಣಿಗೆಯೂ ಅಗತ್ಯ. ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುವಂತೆ ಕಲಾ ಪದವಿಯನ್ನು ಪುನಾರಚಿಸುವುದು. ಈ ಮೂಲಕ ಮಾರುಕಟ್ಟೆ ಅಥವಾ ಆರ್ಥಿಕ ಆಧಾರಕ್ಕಿಂತ ಹೊರತು ಪಡಿಸಿ ಕಲಾ ಪದವಿಯತ್ತ ದೃಷ್ಟಿ ಹರಿಸುವುದು. 

– ಡಾ| ಶ್ರೀಕಾಂತ್‌ ಸಿದ್ದಾಪುರ 

Advertisement

Udayavani is now on Telegram. Click here to join our channel and stay updated with the latest news.

Next