Advertisement

ಕಲಾವಿದರು ಮೌಲ್ಯ ಅಳವಡಿಸಿಕೊಳ್ಳಲಿ

03:19 PM Feb 28, 2017 | |

ಧಾರವಾಡ: ಕಲಾವಿದರು ಮೊದಲು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಕಲಾವಿದರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ|ಎಂ. ಎಸ್‌.ಮೂರ್ತಿ ಹೇಳಿದರು. 

Advertisement

ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನಗರದ ಸರಕಾರಿ ಆರ್ಟ್‌ ಗ್ಯಾಲರಿಯ ಸಭಾಭವನದಲ್ಲಿ ಮಾರ್ಚ್‌ 2 ರವರೆಗೆ ಹಮ್ಮಿಕೊಂಡ ಯುಗಾದಿ ರಾಷ್ಟ್ರೀಯ ಚಿತ್ರಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆಯಲ್ಲಿ ಮಾನವೀಯ ಮೌಲ್ಯಗಳನ್ನು ತೋರಿಸುವ ಮೂಲಕ ಅನೇಕ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಚಿತ್ರಕಲೆ ಹಾಗೂ ಕಲಾವಿದರನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ಟ್ರಸ್ಟ್‌ ಹಲವಾರು ಚಿತ್ರಕಲಾ ಶಿಬಿರಗಳನ್ನು ಏರ್ಪಡಿಸಿದೆ. ಇಂದಿನ ಯುವಕರು ಪಠ್ಯದ ಜತೆಗೆ ಚಿತ್ರಕಲೆ ಬಗ್ಗೆಯೂ ಆಸಕ್ತಿ ತೋರಿಸುವ ಮೂಲಕ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು. 

ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ. ಖ್ಯಾತ ಕಲಾವಿದರಾದ ಪಂ|ಭೀಮಸೇನ ಜೋಶಿ, ಪಂ| ಪುಟ್ಟರಾಜ ಗವಾಯಿಗಳು ಹಾಗೂ ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿಯವರಂಥ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.

ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಕಳೆದ ಎರಡು ದಶಕಗಳಿಂದ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಶಿಬಿರಗಳು ಮೇಲಿಂದ  ಮೇಲೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಶ್ರೇಷ್ಠ ಚಿತ್ರಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ.

Advertisement

ಯುಗಾದಿ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿರುವ 20 ಕಲಾವಿದರು ಭಾಗವಹಿಸಲಿದ್ದಾರೆ. ಸ್ಥಳೀಯ ಚಿತ್ರಕಲಾ ವಿದ್ಯಾರ್ಥಿಗಳು ಶಿಬಿರಕ್ಕೆ ಆಗಮಿಸಿ ಚಿತ್ರಕಲೆ ಬಗ್ಗೆ ಹೆಚ್ಚು ತಿಳಿದುಕೊಂಡು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕು ಎಂದರು. ಇದೇ ವೇಳೆ ಯುಗಾದಿ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಲು ಬಂದಿದ್ದ ವಿವಿಧ ರಾಜ್ಯಗಳ 20 ಕಲಾವಿದರು ಹಾಗೂ ವೇದಿಕೆ ಮೇಲಿದ್ದ ಗಣ್ಯರು ಚಿತ್ರ ಬಿಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. 

ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸದಸ್ಯ ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಎಂ.ಆರ್‌ .ಬಾಳಿಕಾಯಿ, ಬಿ. ಮಾರುತಿ, ಎಸ್‌. ಕೆ.ಪತ್ತಾರ, ಜೆಎಸ್‌ಎಸ್‌ ಹಾಲಭಾವಿ ಸ್ಕೂಲ್‌ ಆಫ್‌ ಆರ್ಟ್ಸ್ನ ಪಾಚಾರ್ಯೆ ರೇಣುಕಾ ಮಾರ್ಕಾಂಡೆ, ಶಿವಶಂಕರ ಹಿರೇಮಠ, ಶಶಿ ಸಾಲಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಅನಿಲ ದೇಸಾಯಿ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next